ಆಳಂದ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅನುದಾನದಡಿ ಕೊಡಲಹಂಗರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲೆನಾವದಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 4.5 ಕಿ.ಮೀ ರಸ್ತೆ ಕಾಮಗಾರಿ ಕಳೆದ ಬಾರಿ ಕೇವಲ ಮೇ ತಿಂಗಳಲ್ಲೇ ಸಂಪೂರ್ಣ ಧ್ವಂಸವಾಗಿ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿತ್ತು.
ಈ ಕಳಪೆ ಕಾಮಗಾರಿಯ ವಿರುದ್ಧ ಕಲ್ಯಾಣ ಕರ್ನಾಟಕ ಜನಪರ ಕಲ್ಯಾಣ ವೇದಿಕೆ ಅಧ್ಯಕ್ಷ ಶರಣು ಕುಲ್ಕರ್ಣಿ, ಮುಖಂಡರಾದ ಪಿರಪ್ಪ ಗೌಡ ಪಾಟೀಲ್, ಶಾಂತಕುಮಾರ್ ಮಡಿವಾಳ, ದಲಿತ ಸೇನೆ ತಾಲೂಕು ಕಾರ್ಯಾಧ್ಯಕ್ಷ ಪಿಂಟು ಸಾಲೇಗಾಂವ್, ಅಪ್ಪು ಗೋಪಾಲೆ ಸೇರಿದಂತೆ ಹಲವು ಸಂಘಟನೆಗಳು ಒಕ್ಕೊರಲಿನಿಂದ ಹೋರಾಟ ನಡೆಸಿ ದೂರು ಸಲ್ಲಿಸಿದ್ದವು.
ಕಳೆದ 20 ಮಾರ್ಚ್ 2025ರಂದು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದ ಸಂಘಟನೆಗಳು ತಮ್ಮ ತೀವ್ರ ಒತ್ತಡದಿಂದ ಇಂದು (ಡಿ.3) ರಸ್ತೆಯ ಮರುನಿರ್ಮಾಣ ಕಾಮಗಾರಿಗೆ ಚಾಲನೆ ದೊರಕಿಸಿವೆ.
ಇಂದು ಬೆಳಗ್ಗೆಯಿಂದಲೇ ಎಲೆನಾವದಗಿ ರಸ್ತೆಯಲ್ಲಿ ರೋಲರ್‌ಂತಹ ಯಂತ್ರೋಪಕರಣಗಳೊಂದಿಗೆ ಮರುನಿರ್ಮಾಣ ಕೆಲಸ ಆರಂಭವಾಗಿದ್ದು, ಕೆಕೆಆರ್‌ಡಿಬಿ ಆಳಂದ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಯ್ಯದ್ ಜಮಲುದ್ದೀನ್ ಖಾದ್ರಿ ಅವರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ಪರಿಶೀಲಿಸಿ, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಜನಪರ ಕಲ್ಯಾಣ ವೇದಿಕೆ ಅಧ್ಯಕ್ಷ ಶರಣು ಕುಲ್ಕರ್ಣಿ, ದಲಿತ ಸೇನೆ ತಾಲೂಕು ಕಾರ್ಯಾಧ್ಯಕ್ಷ ಪಿಂಟು ಸಾಲೇಗಾಂವ್, ಅಪ್ಪು ಗೋಪಾಳೆ, ಚೇತನ್ ಪಾಟೀಲ್, ರವಿ ಪೂಜಾರಿ, ಶಿವು ಬಿರಾದಾರ, ಮಂಜುನಾಥ ಹಾಗೂ ಇತರ ಕಾರ್ಯಕರ್ತರು ಇದ್ದರು.
“ಜನರ ಧ್ವನಿಗೆ ಅಧಿಕಾರಿಗಳು ಮಣಿದಿದ್ದಾರೆ. ಇದು ಸಂಘಟನೆಯ ಶಕ್ತಿ, ಜನರ ಜಯ” ಎಂದು ಶರಣು ಕುಲ್ಕರ್ಣಿ ಹೇಳಿದ್ದಾರೆ.
ಕಳಪೆ ಕಾಮಕಾರ್ಯಕ್ಕೆ ಕಾರಣರಾದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಗಳು ಒತ್ತಾಯಿಸಿವೆ. ಈಗ ಎಲ್ಲರ ಕಣ್ಣು – ಈ ಬಾರಿ ರಸ್ತೆ ಎಷ್ಟು ದಿನ ಉಳಿಯುತ್ತದೆ? – ಎಂಬುದರತ್ತ ನೆಟ್ಟಿದೆ.









