ಆಳಂದ: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯಮಟ್ಟದ ಮುಷ್ಕರದ ಆಹ್ವಾನಕ್ಕೆ ಬೆಂಬಲವಾಗಿ, ಆಳಂದ ಪೌರ ನೌಕರರ ಸಂಘದ ಅಧ್ಯಕ್ಷ ಸಿದ್ದರಾಮ ಭಟಗೇರಿ ಅವರ ನೇತೃತ್ವದಲ್ಲಿ ಆಳಂದ ಪುರಸಭೆಯ ನೌಕರರು ಡಿ.5ರಿಂದ ಕರ್ತವ್ಯಕ್ಕೆ ಗೈರಾಗಿದ್ದು ಅನಿರ್ದಿಷ್ಟ ಅವಧಿ ಮುಷ್ಕರ ನಡೆಸಲಿದ್ದಾರೆ.
ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಬೇಡಿಕೆಯ ಮನವಿ ಸಲ್ಲಿಸಿ, ರಾಜ್ಯ ಸಂಘದ ನಿರ್ದೇಶನದಂತೆ ಪುರಸಭೆ ಹಾಗೂ ಪೌರ ನೌಕರರ ಬಾಕಿ ಬೇಡಿಕೆಗಳನ್ನು ಸರ್ಕಾರ ಶೀಘ್ರ ಪೂರೈಸಬೇಕು ಎಂಬ ಒತ್ತಾಯದಿಂದ ಈ ಮುಷ್ಕರ ಕೈಗೊಳ್ಳಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಎಲ್ಲಾ ಪೌರ ನೌಕರರಿಗೆ ನೌಕರರ ರಾಜ್ಯ ಸೇವೆಯಂತೆ ರಾಜ್ಯ ಸರ್ಕಾರದ ನೌಕರರಿಗೆ ನೀಡುವ ಸೌಲಭ್ಯಗಳನ್ನು ವಿಸ್ತರಿಸಬೇಕು. ಹಾಗೆಯೇ ನಿರಂತರ ಸೇವೆಯನ್ನು ಪರಿಗಣಿಸಿ ಹುದ್ದೆ ವರ್ಗಾವಣೆ, ವೇತನವೃದ್ಧಿ, ಭದ್ರತೆ ಹಾಗೂ ಸೇವಾ ಸೌಕರ್ಯಗಳನ್ನು ಕಲ್ಪಿಸಬೇಕು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರ ಸಮಸ್ಯೆಗಳನ್ನು ನಿರ್ಧಾರಾತ್ಮಕವಾಗಿ ಬಗೆಹರಿಸಲು ರಾಜ್ಯಮಟ್ಟದ ವೇದಿಕೆ ರಚನೆ ಅಗತ್ಯ. ನೀರು ಪೂರೈಕೆ, ಸ್ವಚ್ಛತೆ, ಬೆಳಕು ಸೇವೆಗಳು ಸೇರಿದಂತೆ ಪುರಸಭೆಗಳ ಮೂಲಭೂತ ಸೇವೆಗಳ ಜವಾಬ್ದಾರಿ ನಿರ್ವಹಿಸುವ ನೌಕರರಿಗೆ ಸ್ಥಿರ ಹುದ್ದೆಗಳ ರಚನೆ ಹಾಗೂ ಭದ್ರತೆ ನೀಡಬೇಕು.
ಗಣಕಯಂತ್ರದ ವೇತನ ವ್ಯವಸ್ಥೆಯಲ್ಲಿ ಉಂಟಾಗಿರುವ ತೊಂದರೆಗಳನ್ನು ನಿವಾರಿಸಿ ಸಮರ್ಪಕ ವೇತನ ಬಿಡುಗಡೆ ಮಾಡಬೇಕು. ಬಿ.ಎಸ್.ಎಂ.ಎಸ್., ಸಫಾಯಿ ನೌಕರರು ಹಾಗೂ ಇತರ ದಿನಗೂಲಿ ನೌಕರರಿಗೆ ಸ್ಥಿರೀಕರಣ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ, ಆಳಂದ ಪುರಸಭೆಯ ಎಲ್ಲಾ ವಿಭಾಗದ ನೌಕರರು ಡಿ.5ರಂದು ಸೇವೆಯಿಂದ ಹಿಂದೆ ಸರಿದು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಮುಷ್ಕರಕ್ಕೆ ಅವಕಾಶ ನೀಡಬೇಕು ಎಂದು ಮುಖ್ಯಾಧಿಕಾರಿಗಳಿಗೆ ಸಂಘದ ನಾಯಕರು ಮನವಿ ಸಲ್ಲಿಸಿದರು.
ಸಂಘದ ಮಾಜಿ ಅಧ್ಯಕ್ಷ ಶಿವರಾಯ ಸರಸಂಬಿ, ಉಪಾಧ್ಯಕ್ಷ ಪಪ್ಪು ಉಕ್ರಂಡೆ, ಕಾರ್ಯದರ್ಶಿ ಬೀರಪ್ಪಾ ಪೂಜಾರಿ, ರವಿಕಾಂತ ಮೀಸ್ಕಿನ್, ಚಂದ್ರಶೇಖರ ಸನಗುಂದೆ, ಚಿದಾನಂದ ಜಂಗಲೆ, ಮೌಲಾಲಿ ಖಂಡುವಾಲೆ, ಮುಜೀಬ್ ಸಯ್ಯದ್, ರಾಜಕುಮಾರ ಪಿಂಪಳೆ ಉಪಸ್ಥಿತರಿದ್ದರು.









