ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ದುಡ್ಡು ಹೊಡೆಯಲೆಂದೇ ಈ ಪ್ಲ್ಯಾನ್! ಡಿ. 4ರಂದು ಧರಣಿ. ಆಳಂದ ಕಾಮಗಾರಿಗೆ ಚಿತ್ತಾಪೂರ ಎಇಇ ಸಹಿ – ಮಾಜಿ ಶಾಸಕ ಗುತ್ತೇದಾರ ದೂರು.

On: November 29, 2025 7:30 PM

ಆಳಂದ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಯೋಜನೆಯ ಅಡಿಯಲ್ಲಿ ಕೈಗೊಳ್ಳುತ್ತಿರುವ ಅನೇಕ ಕಾಮಗಾರಿಗಳನ್ನು ಕಳಪೆ ಮಟ್ಟದಲ್ಲಿ ನಿರ್ಮಿಸಿ ಸರ್ಕಾರದ ಹಣ ಲೂಟಿ ಮಾಡುವ ಕೆಲಸ ಆಳಂದ ತಾಲೂಕಿನಲ್ಲೇ ನಡೆಯುತ್ತಿದ್ದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ದೂರು ನೀಡಿದ್ದಾರೆ.

ಕಲಬುರಗಿ–ಆಳಂದ ರಾಜ್ಯ ಹೆದ್ದಾರಿ (ಎಸ್‌ಎಚ್-10) ರಿಂದ ಎಲೆನಾವದಗಿ–ಕೊಡಲಹಂಗರಗಾ ಹತ್ತಿರದಿಂದ ಎಲೆನಾವದಗಿ ಗ್ರಾಮದ ರಸ್ತೆ 4.50 ಕಿ.ಮೀ. ಕಾಮಗಾರಿ ಮುಗಿಯುವ ಹಂತದಲ್ಲಿಯೇ ಕಿತ್ತುಹೋಗಿದೆ. ಮೇ ತಿಂಗಳಲ್ಲಿ ಹಾಳಾಗಿ ಹೋಗಿದೆ. ಜನರು ನಡೆದುಕೊಂಡು ಹೋಗಲು ಆಗುತ್ತಿಲ್ಲ. ದ್ವಿಚಕ್ರ ವಾಹನಗಳು ಓಡಿಸಲು ಆಗುತ್ತಿಲ್ಲ. ಎಷ್ಟೋ ಜನರು ಬಿದ್ದು ಕೈಕಾಲು ಮುರಿದಿದ್ದಾರೆ. ಅಧಿಕಾರಿಗಳಿಗೆ ಮಳೆಗಾಲಕ್ಕೂ ಮುಂಚಿತವಾಗಿ ದೂರು ನೀಡಲಾಗಿದೆ. ಆದರೂ ಕೂಡ ಗುತ್ತಿಗೆದಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರದ 4 ಕೋಟಿ ರೂಪಾಯಿ ಖರ್ಚಾಗಿದ್ದು, ನಾಲ್ಕು ತಿಂಗಳು ಕೂಡ ರಸ್ತೆ ಬಾಳಿಕೆ ಬರಲಿಲ್ಲ. ಇದು ಯಾವ ವೈಜ್ಞಾನಿಕ ಪದ್ಧತಿ? ಇಡೀ ರಸ್ತೆಯಲ್ಲಿ ಡಾಂಬರ್ ನೋಡಲು ಸಿಗುವುದಿಲ್ಲ. ಹೀಗಿರುವಾಗ ಯಾವ ಗುಣಮಟ್ಟದ ರಸ್ತೆ ನಿರ್ಮಿಸಿರಬೇಕು ಎಂಬುದನ್ನು ಯೋಚಿಸಬೇಕಾಗಿದೆ. ಅಂದಾಜು ಪಟ್ಟಿಯಂತೆ ಕಾಮಗಾರಿ ಮಾಡಿಲ್ಲ. ನಿಯಮಗಳು ಪಾಲನೆಯಾಗಿಲ್ಲ. ಸುಳ್ಳು ಲೆಕ್ಕ ತೋರಿಸಿ 4 ಕೋಟಿ ರೂ. ಹಣ ಲೂಟಿ ಮಾಡಿದ್ದಾರೆ ಎಂದು ಅವರು ದೂರು ನೀಡಿದ್ದಾರೆ.

ಇದೇ ರೀತಿ ವಾಗ್ಧರಿ–ರಿಪ್ಪನಪಳ್ಳಿ ಮುಖ್ಯ ರಸ್ತೆಯಿಂದ ಪಡಸಾವಳಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ರೂ. 1.00 ಕೋಟಿ (ಕೆಕೆಆರ್‌ಡಿಬಿ 2023–24ನೇ ಸಾಲಿನ) ಅಡಿಯಲ್ಲಿ ಮಾಡಲಾಗಿದೆ. ಈ ರಸ್ತೆಯೂ ನಿರ್ಮಾಣವಾದ ಎರಡು ತಿಂಗಳಲ್ಲಿಯೇ ಹಾಳಾಗಿದೆ. ಇಲ್ಲಿಯೂ ಸರ್ಕಾರದ ಬೊಕ್ಕಸಕ್ಕೆ 1 ಕೋಟಿ ರೂ. ನಷ್ಟವಾಗಿದೆ ಎಂದು ದೂರಿದ್ದಾರೆ.

ಆಳಂದ ತಾಲೂಕಿನ ವಾಗ್ಧರಿ–ರಿಪ್ಪನಪಳ್ಳಿ ಮುಖ್ಯ ರಸ್ತೆಯಿಂದ ಪಡಸಾವಳಿ ರಸ್ತೆ ಕಾಮಗಾರಿಯನ್ನು ಕರ್ನಾಟಕ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ವಹಿಸಿಕೊಡಬೇಕಾಗಿದ್ದರೂ ನಿಯಮಬಾಹಿರವಾಗಿ ಚಿತ್ತಾಪೂರ ಉಪವಿಭಾಗಕ್ಕೆ ನೀಡಲಾಗಿದೆ. ಆಳಂದ ಕಾಮಗಾರಿ ಬಿಲ್ಲನ್ನು ಎಇ, ಎಇಇ ಹಾಗೂ ಚಿತ್ತಾಪೂರದ ಅಧಿಕಾರಿಗಳು ದಾಖಲಿಸಿ ಹಣ ಲೂಟಿ ಮಾಡಿದ್ದಾರೆ. ಆಳಂದ ತಾಲೂಕು ಎಇಇ ವ್ಯಾಪ್ತಿಗೆ ಬರುತ್ತದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಜಿಲ್ಲಾಡಳಿತ ಮೌನವಾಗಿರುವುದಕ್ಕೆ ಕಾರಣವೇನು? ಇದಕ್ಕೆ ಸರ್ಕಾರವೇ ಉತ್ತರಿಸಬೇಕಾಗಿದೆ ಎಂದು ಪ್ರಶ್ನಿಸಿದ್ದಾರೆ.

ಆಳಂದ ತಾಲೂಕಿನಾದ್ಯಂತ ಕೆಕೆಆರ್‌ಡಿಬಿ ಅನುದಾನದ ಅನೇಕ ಕಾಮಗಾರಿಗಳು ಕಳಪೆ ಗುಣಮಟ್ಟದಲ್ಲಿ ನಿರ್ಮಿಸಿ ಕೋಟ್ಯಾಂತರ ರೂ.ಗಳನ್ನು ಲೂಟಿ ಮಾಡಲಾಗುತ್ತಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಭಯವೇ ಇಲ್ಲದಂತಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ.

ಇದೇ ಕಾರಣಕ್ಕೆ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ ಗುತ್ತಿಗೆದಾರರು ಮತ್ತು ಅವರಿಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಡಿ. 4 ಡಿಸೆಂಬರ್ 2025ರಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಛೇರಿ ಎದುರು ಸಂಬಂಧಿತ ಗ್ರಾಮಸ್ಥರೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join WhatsApp

Join Now

Leave a Comment

error: Content is Protected!