ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಆಳಂದದ ಮುಖ್ಯರಸ್ತೆ ಅಗಲೀಕರಣ ನ. 17ಕ್ಕೆ

On: October 19, 2025 11:41 AM

ಆಳಂದ: ಪಟ್ಟಣದ ಬಹುಕಾಲದ ಕನಸು ಈಗ ಸಾಕಾರವಾಗುತ್ತಿದೆ. ಮುಖ್ಯರಸ್ತೆಯ ಅಗಲೀಕರಣಕ್ಕಾಗಿ ನವೆಂಬರ್ 17ರಂದು ಚಿತ್ರಣೀಕರಣ (ಪಿಕ್ಸ್) ನಡೆಸಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ತುರ್ತು ಸಭೆಯಲ್ಲಿ ಅಧ್ಯಕ್ಷ ಫಿರದೋಸ್ ಅನ್ಸಾರಿ ಗೌಡಾ ಅವರ ಅಧ್ಯಕ್ಷತೆಯಲ್ಲಿ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್. ಪಾಟೀಲ ಅವರ ಸಮ್ಮುಖದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಹಲವು ಪ್ರಮುಖ ನಿರ್ಧಾರಗಳಿಗೆ ಸರ್ವಾನುಮತದಿಂದ ಅನುಮೋದನೆ ನೀಡಿದರು.

ಆಳಂದದ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಮುಖ್ಯರಸ್ತೆಯ ಅಗಲೀಕರಣ ಕುರಿತು ಗಂಭೀರ ಚರ್ಚೆ ನಡೆಯಿತು ಮತ್ತು ಅಂತಿಮ ನಿರ್ಧಾರ ಕೈಗೊಳ್ಳಲಾಯಿತು. ಯೋಜನೆಯಂತೆ ಪಟ್ಟಣದ ಮುಖ್ಯರಸ್ತೆಯನ್ನು ದರ್ಗಾ ಚೌಕ್‌ನಿಂದ ಹಳೆಯ ತಹಸೀಲ್ದಾರ ಕಚೇರಿ ವರೆಗೆ ವಿಸ್ತರಿಸಲಾಗುತ್ತದೆ. ಇದು ಪಟ್ಟಣದ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರವಾಗಲಿದೆ. “ಸಾರ್ವಜನಿಕರ ಸಹಕಾರದೊಂದಿಗೆ ನವೆಂಬರ್‌ನಲ್ಲಿ ಕೆಲಸ ಆರಂಭಿಸುತ್ತೇವೆ,” ಎಂದು ಶಾಸಕ ಬಿ.ಆರ್. ಪಾಟೀಲ ಸಭೆಯಲ್ಲಿ ಹೇಳಿದರು.

ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪ: ಸಭೆಯಲ್ಲಿ ಮತ್ತೊಂದು ಮಹತ್ವದ ನಿರ್ಧಾರವಾಗಿ ಪುರಸಭೆಯನ್ನು ನಗರಸಭೆಯಾಗಿ ಉನ್ನತೀಕರಿಸುವ ಬಗ್ಗೆ ತೀರ್ಮಾನ ಕೈಗೊಂಡು ಠರವು ಪ್ರಸ್ತಾಪಿಸಲು ನಿರ್ಧರಿಸಲಾಯಿತು.

ಪ್ರಸ್ತುತ ಆಳಂದ ಟೌನ್ ಮುನ್ಸಿಪಲ್ ಕೌನ್ಸಿಲ್ (ಟಿಎಂಸಿ) 27 ವಾರ್ಡ್‌ಗಳೊಂದಿಗೆ 35,000ಕ್ಕೂ ಹೆಚ್ಚು ಜನಸಂಖ್ಯೆಯನ್ನು ನಿರ್ವಹಿಸುತ್ತಿದೆ. ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಉತ್ತರ ವಲಯಗಳನ್ನು ವಿಸ್ತರಿಸಲು ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಭವಿಷ್ಯದಲ್ಲಿ 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ನಗರಾಭಿವೃದ್ಧಿ ಯೋಜನೆ ರೂಪಿಸಲು ಶಾಸಕರು ಸಲಹೆ ನೀಡಿದರು.

7 ಕೋಟಿ ಅನುದಾನಕ್ಕೆ ಪ್ರಸ್ತಾವ – ನೂತನ ಕಚೇರಿ ಕಟ್ಟಡ ಮತ್ತು ನಗರ ಸೌಂದರ್ಯಕರಣ: ಪುರಸಭೆ ಆವರಣದಲ್ಲಿ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ 7 ಕೋಟಿ ರೂಪಾಯಿಗಳ ಅನುದಾನಕ್ಕೆ ಸರ್ಕಾರಕ್ಕೆ ಕ್ರಿಯಾ ಯೋಜನೆ ಸಲ್ಲಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಪ್ರಸ್ತುತ ಕಚೇರಿ ಕಟ್ಟಡ ಹಳೆಯದು ಮತ್ತು ಸೌಲಭ್ಯಗಳ ಕೊರತೆಯೊಂದಿಗೆ ಇದ್ದು, ಹೊಸ ಕಟ್ಟಡವನ್ನು ಡಿಜಿಟಲ್ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲಾಗುತ್ತದೆ ಎಂದು ಮುಖ್ಯಾಧಿಕಾರಿ ಸಂಗಮೇಶ್ ಪನ್‌ಶೆಟ್ಟಿ ತಿಳಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ ನಗರ ಸೌಂದರ್ಯಕರಣಕ್ಕಾಗಿ ವಿಶೇಷ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಯಿತು. ಪಾರ್ಕ್‌ಗಳ ನಿರ್ಮಾಣ, ರಸ್ತೆಯ ಆಧುನೀಕರಣ, ಗಿಡಮರ ನೆಡುವುದು, ರಸ್ತೆ ಬೆಳಕು ವ್ಯವಸ್ಥೆ ಮುಂತಾದವುಗಳಿಗೆ ಒತ್ತು ನೀಡಲಾಗುತ್ತದೆ. “ನಗರವನ್ನು ಹಸಿರು ಮತ್ತು ಸೌಂದರ್ಯಮಯವಾಗಿಸುವುದು ನಮ್ಮ ಆದ್ಯತೆ. ಮುಖ್ಯಮಂತ್ರಿ ಮುಂದಿನ ವರ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ,” ಎಂದು ಶಾಸಕರು ಹೇಳಿದರು.

ವಾರ್ಡ್ ಸಮಸ್ಯೆಗಳ ಕುರಿತ ಚರ್ಚೆ – ನೀರು, ಶೌಚಾಲಯ ಮತ್ತು ಗ್ರಂಥಾಲಯ ವಿವಾದ: ವಾರ್ಡ್‌ಗಳ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಮೊದಲು ಸಾರ್ವಜನಿಕ ಶೌಚಾಲಯಗಳನ್ನು ಬಳಕೆಗೆ ಅನುಕೂಲಕರಗೊಳಿಸಬೇಕು ಮತ್ತು ಕುಡಿಯುವ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಲಭ್ಯವಿರುವ ಕೊಳವೆಬಾವಿಗಳಿಂದ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಪಟ್ಟಣದ ಶ್ರೀರಾಮರುಕಟ್ಟೆ ಪ್ರದೇಶದಲ್ಲಿನ ನೂತನ ಗ್ರಂಥಾಲಯ ಕಟ್ಟಡವನ್ನು ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸುವ ಕುರಿತು ಚರ್ಚೆ ನಡೆದರೂ, ನೇಕಾರ ಬಡಾವಣೆಯ ಸದಸ್ಯ ವಹೀದ್ ಜರ್ದಿ ಸೇರಿದಂತೆ ಇಬ್ಬರು ಇದರ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರು. “ಗ್ರಂಥಾಲಯವು ಶಿಕ್ಷಣದ ಕೇಂದ್ರ. ಆಸ್ಪತ್ರೆ ಇದ್ದ ಸ್ಥಳದಲ್ಲೇ ಮುಂದುವರಿಯಲಿ,” ಎಂದು ಅವರು ತಿಳಿಸಿದರು. ಈ ಕುರಿತು ಇನ್ನಷ್ಟು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.

ಮುಖ್ಯಾಧಿಕಾರಿ ಸಂಗಮೇಶ್ ಪನ್‌ಶೆಟ್ಟಿ ಸಭೆಯ ಆರಂಭದಲ್ಲೇ ಚರ್ಚಿಸಬೇಕಾದ ವಿಷಯಗಳ ಪಟ್ಟಿಯನ್ನು ಮಂಡಿಸಿ, ಅಗತ್ಯ ಸಿದ್ಧತೆಗಳನ್ನು ತ್ವರಿತಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಶಾಸಕ ಬಿ.ಆರ್. ಪಾಟೀಲ ಸಿಬ್ಬಂದಿಗೆ “ಈ ನಿರ್ಧಾರಗಳನ್ನು ಜನರಿಗೆ ತಲುಪಿಸಿ, ಅವರ ಸಹಕಾರ ಪಡೆಯಿರಿ,” ಎಂದು ಹೇಳಿದರು.

ಸಭೆಯಲ್ಲಿ ಸದಸ್ಯರು ಶಿವುಪುತ್ರ ನಡಗೇರಿ, ಮೃತ್ಯುಂಜಯ ಆಲೂರೆ, ಸೋಮಶೇಖರ ಹತ್ತರಕಿ, ರಾಜಶ್ರೀ ಎಸ್. ಖಜೂರಿ, ಲಕ್ಷ್ಮಣ ಝಳಕಿಕರ್, ದೋಂಡಿಬಾ ಸಾಳುಂಕೆ, ಆಸೀಸ್ ಚೌಸ್, ಶ್ರೀಶೈಲ ಪಾಟೀಲ, ಅಸ್ಮೀತಾ ಚಿಟಗುಪ್ಪಕರ್, ಕವಿತಾ ಮಂಡ್ಲೆ, ಕನ್ಯಾಕುಮಾರಿ ಎಸ್. ಪೂಜಾರಿ, ಪ್ರತಿಭಾ ಘನಾತೆ ಸೇರಿದಂತೆ ಇತರರು ವಾರ್ಡ್ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದರು.

ಪರಿಸರ ಅಭಿಯಂತರ ರವಿಕಾಂತ ಮಿಸ್ಕಿನ್, ಸಮುದಾಯ ಅಧಿಕಾರಿ ಗಾಯತ್ರಿ ಚಿತ್ರಶೇಖರ, ಲೇಖಕಿ ಪಲ್ಲವಿ, ಶಿವರಾಯ ಮಂಗಲಗಿ, ಮಲ್ಲಿಕಾರ್ಜುನ ಕಾಮದಿ, ಸಿದ್ಧಯ್ಯ ಸ್ವಾಮಿ, ಚೋಟು ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಚಿಕಿತ್ಸೆಯಿಂದ ಚೇತರಿಸಿಕೊಂಡ ಮುಖ್ಯಾಧಿಕಾರಿಯ ನೇತೃತ್ವ – ಪ್ರತಿಪಕ್ಷದ ಹಾಸ್ಯ ಚಟಾಕಿಯಿಂದ ನಗೆಗಡಲು: ಒಂದು ವಾರ ಆಸ್ಪತ್ರೆ ಚಿಕಿತ್ಸೆಯ ಬಳಿಕ ಸಭೆಗೆ ಹಾಜರಾದ ಮುಖ್ಯಾಧಿಕಾರಿ ಸಂಗಮೇಶ್ ಪನ್‌ಶೆಟ್ಟಿ ಅವರ ಧೈರ್ಯವಂತಿಕೆಯು ಗಮನ ಸೆಳೆಯಿತು. ಆರೋಗ್ಯ ಸವಾಲುಗಳ ನಡುವೆಯೂ ಅವರು ನಾಲ್ಕು ಗಂಟೆಗಳ ಕಾಲ ಸಭೆಯನ್ನು ಸಮರ್ಥವಾಗಿ ನಿರ್ವಹಿಸಿ, ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದ ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು.

ಸಭೆಯ ಮಧ್ಯದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸೇರಿದಂತೆ ಹಲವು ಸದಸ್ಯರು “ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ, ಆದೇಶಗಳನ್ನು ಪಾಲಿಸುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆಯಲ್ಲಿ ಪ್ರತಿಪಕ್ಷದ ನಾಯಕ ಶ್ರೀಶೈಲ ಪಾಟೀಲ ತಮ್ಮ ಹಾಸ್ಯ ಚಟಾಕಿಯಿಂದ ವಾತಾವರಣ ಹಸನ್ಮಯಗೊಳಿಸಿದರು. “ಅಧ್ಯಕ್ಷರು, ಉಪಾಧ್ಯಕ್ಷರ ಮಾತನ್ನೇ ಅಧಿಕಾರಿಗಳು ಕೇಳುತ್ತಿಲ್ಲ ಅಂದರೆ, ಇನ್ನು ನಾವು ವಿರೋಧ ಪಕ್ಷದವರ ಗತಿ ಏನು, ಶಾಸಕರೇ?” ಎಂದು ತಮಾಷೆಯ ಧಾಟಿಯಲ್ಲಿ ಪ್ರಶ್ನಿಸಿದಾಗ ಸಭಾಂಗಣದಲ್ಲಿ ನಗುವಿನ ಸಿಡಿಲು ಮೂಡಿತು.

ಶಾಸಕ ಬಿ.ಆರ್. ಪಾಟೀಲ ಸಹ ನಗುತ್ತಾ, “ಎಲ್ಲರ ಮಾತನ್ನೂ ಕೇಳಲಾಗುವುದು. ಆದರೆ ಜನರ ಹಿತಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡೋಣ,” ಎಂದು ಪ್ರತಿಕ್ರಿಯಿಸಿದರು.

Join WhatsApp

Join Now

Leave a Comment

error: Content is Protected!