ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಗ್ರಾಮಸ್ಥರ ವಿಶ್ವಾಸ ಹೆಚ್ಚಿಸಿದ ‘ಮನೆ ಮನೆಗೆ ಪೊಲೀಸ್’ ವಿನೂತನ ಅಭಿಯಾನ.

On: October 11, 2025 3:51 PM

ಆಳಂದ: ತಾಲೂಕಿನ ನಿಂಬರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಧುತ್ತರಗಾಂವ ಹಾಗೂ ನರೋಣಾ ಠಾಣೆ ವ್ಯಾಪ್ತಿಯ ಕಡಗಂಚಿ ಗ್ರಾಮಗಳಲ್ಲಿ ಪೊಲೀಸ್ ಇಲಾಖೆಯಿಂದ ಮೊದಲ ಬಾರಿಗೆ ನಡೆದ ‘ಮನೆ ಮನೆಗೆ ಪೊಲೀಸ್’ ಜಾಗೃತಿ ಕಾರ್ಯಕ್ರಮ ಸಾರ್ವಜನಿಕರಿಂದ ಭಾರೀ ಸ್ವಾಗತ ಪಡೆಯಿತು.

ಧುತ್ತರಗಾಂವದ ಶ್ರೀ ವಿರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಮನೆಗಳನ್ನು ಭೇಟಿ ಮಾಡಿ, ಪೊಲೀಸ್ ಇಲಾಖೆಯ ಜಾಗೃತಿ ಕರಪತ್ರಗಳನ್ನು ಹಂಚಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಎಸ್‌.ಪಿ. ಅಡ್ಡೂರು ಶ್ರೀನಿವಾಸಲು ಮಾತನಾಡಿ,

“ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಇದು ನಮ್ಮ ತಂಡದ ಪರಿಶ್ರಮ ಮತ್ತು ಸಾರ್ವಜನಿಕರ ಸಹಕಾರದ ಫಲ. ‘ಮನೆ ಮನೆಗೆ ಪೊಲೀಸ್’ ಯೋಜನೆ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಕನಸಿನ ಯೋಜನೆಯಾಗಿದ್ದು, ಬೆಂಗಳೂರು ಡಿಜಿ ಮತ್ತು ಐಜಿಪಿ ಎಂ.ಎ. ಸಲಿಂ ಅವರ ನೇತೃತ್ವದಲ್ಲಿ ಈ ವಿನೂತನ ಕಾರ್ಯಕ್ರಮ ಜಾರಿಗೆ ಬಂದಿದೆ.

ಈ ಯೋಜನೆಯ ಮೂಲಕ ನಾವು ಪೊಲೀಸ್ ಇಲಾಖೆಯನ್ನು ಕೇವಲ ಕಾನೂನು ಜಾರಿ ಸಂಸ್ಥೆಯಲ್ಲ, ಸಾರ್ವಜನಿಕರ ಸ್ನೇಹಿತ ಹಾಗೂ ಸಹಾಯಕ ಸಂಸ್ಥೆಯಾಗಿ ರೂಪಿಸುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಸುರಕ್ಷತೆ, ಮಕ್ಕಳ ಭದ್ರತೆ, ಸೈಬರ್ ವಂಚನೆ ಹಾಗೂ ಡ್ರಗ್ಸ್ ದುರ್ಬಳಕೆ ಮುಂತಾದ ಸಮಸ್ಯೆಗಳ ಕುರಿತ ನೇರ ಜಾಗೃತಿಯೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಗ್ರಾಮಸ್ಥರು ಈ ಕರಪತ್ರಗಳ ಸದುಪಯೋಗ ಪಡೆದು ಯಾವುದೇ ಸಮಸ್ಯೆ ಎದುರಾದರೂ ತಮ್ಮ ಸ್ಥಳೀಯ ಪೊಲೀಸ್ ಠಾಣೆಯನ್ನು ನಿರ್ಭಯವಾಗಿ ಸಂಪರ್ಕಿಸಲಿ,” ಎಂದು ಹೇಳಿದರು.

ಇನ್ನೂ ಅವರು ಮುಂದುವರಿಸಿ,“ಪೊಲೀಸ್ ಇಲಾಖೆ ಈಗ ರಾಜ್ಯದಲ್ಲಿ 100% ಆನ್‌ಲೈನ್ ಎಫ್‌ಐಆರ್ ದಾಖಲಾತಿಗೆ ಅವಕಾಶ ಕಲ್ಪಿಸಿದೆ. ದೂರದಲ್ಲಿದ್ದರೂ ದೂರುಗಳು ನೀಡಬಹುದಾಗಿದೆ. ಮಹಿಳೆಯರು ಹಾಗೂ ಯುವಕರು ಸೈಬರ್ ಜಗತ್ತಿನಲ್ಲಿ ಎಚ್ಚರಿಕೆಯಿಂದಿದ್ದು, ಅಪರಾಧಕ್ಕೆ ಒಳಗಾಗದಂತೆ ಕಾಪಾಡುವುದು ನಮ್ಮ ಜವಾಬ್ದಾರಿ. ಈ ಕಾರ್ಯಕ್ರಮವು ಗ್ರಾಮೀಣ ಜನರನ್ನು ಸಬಲಗೊಳಿಸುತ್ತದೆ,” ಎಂದರು.

ಡಿವೈಎಸ್‌ಪಿ ತಮ್ಮರಾಯ ಪಾಟೀಲ ಮಾತನಾಡಿ,“ಗ್ರಾಮೀಣ ಪ್ರದೇಶಗಳ ಭದ್ರತಾ ಜಾಲ ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಧುತ್ತರಗಾಂವದಂತಹ ಪ್ರದೇಶಗಳಲ್ಲಿ ಅಪರಾಧ ನಿಯಂತ್ರಣದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಪ್ರಮುಖ. ನಾವು ಯಾವಾಗಲೂ ಸಹಾಯಕವಾಗಿರುತ್ತೇವೆ,” ಎಂದರು.

ಸಿಪಿಐ ಪ್ರಕಾಶ್ ಆರ್. ಯಾತನೂರ ಮಾತನಾಡಿದರು. ನಿಂಬರ್ಗಾ ಪಿಎಸ್‌ಐ ಇಂದುಮತಿ ಹೇಳಿದರು,“ಪೊಲೀಸ್ ಇಲಾಖೆ ಗ್ರಾಮೀಣ ಮಹಿಳೆಯರಿಗೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ಯೋಜನೆಯ ಮೂಲಕ ಆ ಮಾಹಿತಿಯನ್ನು ನೇರವಾಗಿ ತಲುಪಿಸುತ್ತಿದ್ದೇವೆ. ಸಹಭಾಗಿತ್ವದಿಂದ ಗ್ರಾಮವನ್ನು ಅಪರಾಧಮುಕ್ತಗೊಳಿಸೋಣ,” ಎಂದು ತಿಳಿಸಿದರು.

ತನಿಖಾ ಪಿಎಸ್‌ಐ ಶಿವಾನಂದ, ಗ್ರಾಪಂ ಅಧ್ಯಕ್ಷ ಬಸಲಿಂಗಯ್ಯ ಮಠಪತಿ, ಜಿಪಂ ಮಾಜಿ ಸದಸ್ಯ ವೀರಣ್ಣ ಮಂಗಾಣೆ, ನಿವೃತ್ತ ಪೊಲೀಸ್ ಅಧಿಕಾರಿ ವೀರಣ್ಣ ಹೊನ್ನಶೆಟ್ಟಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Join WhatsApp

Join Now

Leave a Comment

error: Content is Protected!