ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಕಲಬುರ್ಗಿ ಪ್ರವಾಹಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ – ಕಿಸಾನಸಭಾ ನಾಯಕ ಮೌಲಾ ಮೌಲಾ ಆರೋಪ.

On: October 7, 2025 5:50 PM

ಆಳಂದ: ಇತ್ತೀಚಿನ ಕಲಬುರ್ಗಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹಕ್ಕೆ ನಿಸರ್ಗವಲ್ಲ, ಸರ್ಕಾರದ ಮತ್ತು ನೀರಾವರಿ ಇಲಾಖೆಯ ನಿರ್ಲಕ್ಷ್ಯವೇ ಮೂಲ ಕಾರಣ ಎಂದು ಅಖಿಲ ಭಾರತ ಕಿಸಾನಸಭೆಯ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮೌಲಾ ಅವರು ತೀವ್ರ ಆರೋಪ ಮಾಡಿದ್ದಾರೆ. ಅವರು ಸಂಬಂಧಿತ ನೀರಾವರಿ ಸಚಿವರ ರಾಜೀನಾಮೆ ನೀಡಬೇಕು ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಆಳಂದ ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜೇವರ್ಗಿ ಶಾಸಕರು ಪ್ರವಾಹ ಪೀಡಿತ ಪ್ರದೇಶಗಳಿಗೆ ಯೋಜನೆ ರೂಪಿಸಿದ್ದರೆ ಪುರಾವೆ ತೋರಿಸಲಿ, ಇಲ್ಲದಿದ್ದರೆ ರಾಜೀನಾಮೆ ನೀಡಲಿ” ಎಂದು ಸವಾಲು ಹಾಕಿದರು.

ಮೌಲಾ ಮೌಲಾ ಅವರು ಮುಂದುವರೆದು, “ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟು ಮತ್ತು ಭೀಮಾ ನದಿ ವಲಯದ ನೀರಾವರಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸದ ಕಾರಣವೇ ನದಿಗಳ ನೀರು ಹರಿಯದೆ ಹಳ್ಳಿಗಳು ಮುಳುಗಿವೆ. ಡ್ಯಾಮ್‍ಗಳಲ್ಲಿ 50ರಿಂದ 60 ಶೇಕಡಾವರೆಗೂ ಹೂಳು ತುಂಬಿಕೊಂಡಿದ್ದರೂ ಅದನ್ನು ತೆರವುಗೊಳಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಹಠಾತ್ ನೀರು ಬಿಡುಗಡೆ ಮಾಡಿದ ಪರಿಣಾಮ ನೂರಾರು ಹಳ್ಳಿಗಳು ನೀರಿನಡಿಯಾಗಿವೆ” ಎಂದು ಆರೋಪಿಸಿದರು.

“ನೂರಾರು ವರ್ಷಗಳಿಂದ ನದಿ ಡಂಡೆಯಲ್ಲಿಯೇ ಇರುವ ಹಳ್ಳಿಗಳು ಈ ಬಾರಿ ಪ್ರವಾಹದ ಹೊಡೆತಕ್ಕೆ ಸಿಲುಕಿವೆ. ಯೋಜಿತವಾಗಿ ನೀರು ಬಿಡುತ್ತಿದ್ದರೆ ಈ ಸ್ಥಿತಿ ಉಂಟಾಗುತ್ತಿರಲಿಲ್ಲ. ಇದು ನಿಸರ್ಗದ ಕ್ರೋಧವಲ್ಲ, ಸರ್ಕಾರದ ನಿರ್ಲಕ್ಷ್ಯದಿಂದ ಉಂಟಾದ ಮಾನವ ಸೃಷ್ಟಿ ದುರಂತ.”

ಭೀಮಾ ನದಿ ತೀರದ 100ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದಿಂದ ತತ್ತರಿಸಿವೆ ಎಂದು ತಿಳಿಸಿ, “ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರವಾಹಪೀಡಿತ ಪ್ರದೇಶಗಳನ್ನು ದೂರದೃಷ್ಟಿಯಿಂದ ನೋಡುತ್ತಿದ್ದಾರೆ. ಡ್ಯಾಮ್‍ಗಳ ಅವೈಜ್ಞಾನಿಕ ನಿರ್ವಹಣೆಯೇ ನಿಜವಾದ ಕಾರಣ” ಎಂದು ಖಂಡಿಸಿದರು.

ಮಳೆ ಮತ್ತು ಬೆಳೆ ಹಾನಿ ಕುರಿತು ಮಾತನಾಡಿ, “ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಿಂದ ಬೆಳೆಗಳು ಚೆನ್ನಾಗಿದ್ದವು. ಆದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ನಿರಂತರ ಮಳೆಯಿಂದ ಉದ್ದು, ಹೆಸರು, ಸೋಯಾಬೀನ್ ಹಾಗೂ ತೊಗರಿ ಬೆಳೆಗಳು ನಾಶಗೊಂಡಿವೆ. ಅನೇಕ ಪಶುಗಳು ಮೃತಪಟ್ಟಿವೆ. ಹೈನುಗಾರಿಕೆ ಕುಸಿದಿದೆ” ಎಂದು ವಿವರಿಸಿದರು.

“ಬರ ಅಥವಾ ಮಳೆ ಎರಡರ ಪರಿಣಾಮದಿಂದಲೂ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ತಕ್ಷಣ ಬರಮುಕ್ತ ಸಶಕ್ತ ಯೋಜನೆ ರೂಪಿಸಿ, ಆರ್ಥಿಕ ಹಾನಿಯನ್ನು ತಡೆಯಬೇಕು. ಜೇವರ್ಗಿ ಶಾಸಕರ ವಿರುದ್ಧ ಕಿಡಿ ಕಾರುತ್ತಾ, “ಪ್ರತಿ ವರ್ಷ ಮಳೆಗಾಲ ಬಂದಾಗ ಕೇವಲ ಪರಿಶೀಲನೆ ನಡೆಸಿ ಚಿತ್ರ ತೆಗೆಸಿಕೊಳ್ಳುತ್ತಾರೆ. ಹಿಂದೆ ನಾಲ್ಕು ಬಾರಿ ಇದೇ ಸ್ಥಿತಿ ಸಂಭವಿಸಿದೆ. ಈ ಬಾರಿ ಕ್ರಮ ಕೈಗೊಂಡಿದ್ದರೆ ಪುರಾವೆ ತೋರಿಸಲಿ, ಇಲ್ಲದಿದ್ದರೆ ರಾಜೀನಾಮೆ ನೀಡಿ” ಎಂದು ಕಿಡಿಕಾರಿದರು.

ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ, ಸಂಬಂಧಿತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮೌಲಾ ಮೌಲಾ ಆಗ್ರಹಿಸಿದರು.

ಅವರು ಮುಂದುವರೆದು, “ರೈತರ ಸಾಲಮನ್ನಾ, ಎಂಎಸ್‍ಪಿ ಜಾರಿ, ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಅಕ್ಟೋಬರ್ 2ರಿಂದ ಕಲಬುರ್ಗಿಯ ಜಗತ್ ಸರ್ಕಲ್‍ನಲ್ಲಿ ಪ್ರಾರಂಭಿಸಿರುವ ಧರಣಿ ಸತ್ಯಾಗ್ರಹಕ್ಕೆ ರೈತರು, ಪರಿಸರ ಪ್ರೇಮಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು” ಎಂದು ಮನವಿ ಮಾಡಿದರು.

“ಎಂಎಸ್‍ಪಿ ಇಲ್ಲದಿದ್ದರೆ ಸಾಲಮನ್ನಾ ಕಡ್ಡಾಯ. ಬೆಳೆಗಳಿಗೆ ನ್ಯಾಯಸಮ್ಮತ ಬೆಲೆ ಸಿಗದೇ ರೈತರಿಗೆ ಮುಕ್ತಿ ಅಸಾಧ್ಯ. ಹೋರಾಟ ಮುಂದುವರೆಯುತ್ತದೆ” ಎಂದು ಮೌಲಾ ಮೌಲಾ ಘೋಷಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಕಿಸಾನಸಭಾ ಕಾರ್ಯಕರ್ತರು ಉಪಸ್ಥಿತರಿದ್ದರು.

Join WhatsApp

Join Now

Leave a Comment

error: Content is Protected!