ಆಳಂದ: ಪಟ್ಟಣದ ಭಾವೈಕ್ಯದ ಸೂಫಿ ಸಂತ ಹಜರತ್ ಲಾಡಲೇ ಮಶಾಕ ಅನ್ಸಾರಿ ಅವರ 670ನೇ ಉರುಸು ಅಂಗವಾಗಿ ಗುರುವಾರ ಸಂಜೆ ಅದ್ಧೂರಿಯಾಗಿ ಸಂದಲ್ (ಗಂದೋತ್ಸವ) ಮೆರವಣಿಗೆ ನೆರವೇರಿತು. ಪಟ್ಟಣದ ಪ್ರಮುಖ ರಸ್ತೆಮಾರ್ಗಗಳಿಂದ ಶುಕ್ರವಾರ ನಸುಕಿನವರೆಗೂ ಸಾಗಿದ ಈ ಮೆರವಣಿಗೆ ಭಕ್ತಿಯ ಉತ್ಸಾಹದಿಂದ ಕೂಡಿತ್ತು.
ಮಧ್ಯಾಹ್ನ ತಾಲೂಕು ಆಡಳಿತಸೌಧದಲ್ಲಿ ತಹಸೀಲ್ದಾರರು ಸಾಂಪ್ರದಾಯಿಕ ಪೂಜೆ ನೆರವೇರಿಸಿದರು. ಈ ಮೊದಲು ಕಲಾವಿದರಿಂದ ಭಕ್ತಿ ತುಂಬಿದ ಖವ್ವಾಲಿಗಳು ಜರುಗಿದವು. ನಂತರ ಹಳೆಯ ತಹಸೀಲ ಕಚೇರಿಯಿಂದ ಆರಂಭವಾದ ಮೆರವಣಿಗೆಯನ್ನು ಮುಖ್ಯರಸ್ತೆಯ ಮಾರ್ಗವಾಗಿ ಅನ್ಸಾರಿ ಪರಂಪರೆಯ ಮುಖಂಡ ಸಾಧತ್ ಅನ್ಸಾರಿ ಹಾಗೂ ಇತರ ಮುಖಂಡರು ತಲೆಯ ಮೇಲೆ ಗಂಧವನ್ನಿಟ್ಟು ಭವ್ಯವಾಗಿ ಚಾಲನೆ ನೀಡಿದರು. ಕಮೀಟಿ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಗಂಧವನ್ನು ತಲೆಯ ಮೇಲೆ ಇಟ್ಟು ಭಕ್ತಿಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಹಿಂದೂ–ಮುಸ್ಲಿಂ ಭಾಂದವರು ಸೇರಿ ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ದಟ್ಟಿಸಿತ್ತು. ಧಾರ್ಮಿಕ ಪಠಣ, ವಾದ್ಯವೃಂದಗಳ ಮೆರವಣಿಗೆ ವಿಶೇಷ ಗಮನ ಸೆಳೆಯಿತು.
ಶುಕ್ರವಾರ ಸಂಜೆ ದರ್ಗಾ ಆವರಣದಲ್ಲಿ ದೀಪೋತ್ಸವ ಹಾಗೂ ಖ್ಯಾತ ಕಲಾ ತಂಡಗಳಿಂದ ಖವ್ವಾಲಿ ಕಾರ್ಯಕ್ರಮ ನಡೆದಿತು. ದೆಹಲಿ, ಮುಂಬೈ, ಹೈದರಾಬಾದ್, ಪುಣೆ ಸೇರಿದಂತೆ ದೇಶದ ನಾನಾ ಭಾಗಗಳಿಂದ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದರು. ಏಷ್ಯದ ಅತಿ ವಿಶಾಲ ದರ್ಗಾ ಆವರಣವೆಂದು ಪ್ರಸಿದ್ಧಿ ಪಡೆದಿರುವ ಈ ಸ್ಥಳದಲ್ಲಿ ಜಾತ್ರೆ ಆವರಣದಲ್ಲಿ ಅಂಗಡಿಗಳು, ಆಟಿಕೆ ಮಾರಾಟ ಕೇಂದ್ರಗಳು ಹಾಗೂ ವ್ಯಾಪಾರ ಅದ್ದೂರಿಯಾಗಿ ಕೂಡಿದೆ.
ದರ್ಗಾ ಕಮಿಟಿಯ ವತಿಯಿಂದ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಸೇರಿ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲಾಗಿತ್ತು. ದರ್ಗಾದ ಪ್ರಮುಖ ಗೋಪುರ, ಎರಡು ದ್ವಾರಕಮಾನು ಹಾಗೂ ಮುಖ್ಯದ್ವಾರದ ಮಿನಾರಗಳನ್ನು ರಂಗು ರಂಗಿನ ವಿದ್ಯುತ್ ದೀಪಗಳಿಂದ ಅಲಂಕರಿಸಿ ಸಾಂಸ್ಕೃತಿಕ ಹೊಳಪಿನಿಂದ ಕಣ್ಮನ ಸೆಳೆಯುವಂತಾಗಿದೆ.









