ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಹಲವೆಡೆ ಆಧಾರ್ ಕೇಂದ್ರಗಳ ಸ್ಥಗಿತ: ತಿದ್ದುಪಡಿ, ನವೀಕರಣಕ್ಕಾಗಿ ಜನ ಪರದಾಟ.

On: September 29, 2025 10:30 PM

ಆಳಂದ: ವಿದ್ಯಾರ್ಥಿಗಳಿಗೆ ಶಿಕ್ಷಣ, ಶಿಷ್ಯವೇತನ, ಸಾರ್ವಜನಿಕರಿಗೆ ಆನ್‍ಲೈನ್ ಸೇವೆಗಳು ಮತ್ತು ಸರ್ಕಾರಿ ಸೌಲಭ್ಯಗಳಿಗೆ ಅಗತ್ಯವಾಗಿರುವ ಆಧಾರ್ ಕಾರ್ಡ್ ನವೀಕರಣ ಅಥವಾ ತಿದ್ದುಪಡಿ ಸಕಾಲಕ್ಕೆ ನಡೆಯದಿರುವುದರಿಂದ ತಾಲೂಕಿನ ಗ್ರಾಮೀಣ ಹಾಗೂ ಪಟ್ಟಣದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಆಡಳಿತ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಆಧಾರ್ ಕಾರ್ಡ್ ಹೊಸದು, ನವೀಕರಣ, ತಿದ್ದುಪಡಿ ಸೇರಿ ಇದರ ನಿರ್ವಹಣೆಗೆ ಸರ್ಕಾರ ಟೆಂಡರ್ ಮೂಲಕ ಅರ್ಜಿ ಆಹ್ವಾನಿಸಿ ಕೇಂದ್ರಗಳನ್ನು ಮಂಜೂರಾತಿ ನೀಡುತ್ತದೆ. ಆದರೆ ಕೇಂದ್ರಗಳಿಗೆ ನಿರ್ವಹಣಾ ವೆಚ್ಚ ಪಾವತಿಸದೆ ಇರುವುದರಿಂದ, ಮೂಲಗಳ ಪ್ರಕಾರ, ಬಹುತೇಕ ಕಡೆ ಕೇಂದ್ರಗಳು ಸ್ಥಗಿತಗೊಂಡಿವೆ. ಇದರಿಂದ ಸಾರ್ವಜನಿಕರು ಅಸಹನೆ ಅನುಭವಿಸುತ್ತಿದ್ದಾರೆ.

ಪಟ್ಟಣದ ತಹಸೀಲ್ದಾರ ಕಚೇರಿಯ ಆಧಾರ್ ಕೇಂದ್ರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿನ ಕೇಂದ್ರಗಳು ಕಾರ್ಯನಿರ್ವಹಿಸದೇ ಇರುವುದರಿಂದ ಆಧಾರ್ ತಿದ್ದುಪಡಿ, ವಿಳಾಸ ಬದಲಾವಣೆ, ಜನ್ಮ ದಿನಾಂಕ ತಿದ್ದುವಂತಹ ಅಗತ್ಯ ಕಾರ್ಯಗಳಿಗಾಗಿ ಜನರು ಹತಾಶರಾಗುತ್ತಿದ್ದಾರೆ. ಪ್ರತಿದಿನವೂ ಕೇಂದ್ರಗಳಿಗೆ ತೆರಳಿ ಬರಿಗೈಯಿಂದ ಮರಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.

ಆಧಾರ್ ಕೇಂದ್ರಗಳಲ್ಲಿ ಏಕೆ ಕಾರ್ಯನಿರ್ವಹಣೆಯ ಅಡಚಣೆ ಎಂಬುದರ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡದೆ ದಿನಗಟ್ಟಲೆ ಸಮಯ ಕಳೆಯುತ್ತಿದ್ದಾರೆ. ಆದರೆ ತಮ್ಮ ಆಧಾರ್ ತಿದ್ದುಪಡಿ ಮಾಡಲು ವಿದ್ಯಾರ್ಥಿಗಳು ಶಾಲೆ-ಕಾಲೇಜು ರಜೆ ಹಾಕಿ, ಪಾಲಕರು-ಪೋಷಕರೊಂದಿಗೆ ದೀರ್ಘ ಸರಣಿಗಳಲ್ಲಿ ನಿಂತು ಪರದಾಡುತ್ತಿದ್ದಾರೆ.

ಆಳಂದ, ನಿಂಬರಗಾ ಹಾಗೂ ನರೋಣಾ ಹೋಬಳಿ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದು, ಕೆಲವೇ ಕೇಂದ್ರಗಳಲ್ಲಿ ಅಪಾಯಿಂಟ್‌ಮೆಂಟ್ ಸಮಸ್ಯೆ ಹಾಗೂ ಜನದಟ್ಟಣೆಯಿಂದ ಶಿಷ್ಯವೇತನ ಅರ್ಜಿಗಳು ತಡವಾಗುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಆಧಾರ್ ತಿದ್ದುಪಡಿ ಕೂಡಾ ಸಮಯಕ್ಕೆ ಆಗದೆ, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ನವೀಕರಣ–ತಿದ್ದುಪಡಿ ವಿಳಂಬ, ಅವಕಾಶ ಕಳೆದುಕೊಂಡವರು: ಆಧಾರ್ ತಿದ್ದುಪಡಿಗೆ ಕೇಂದ್ರಗಳಿಗೆ ಹೋದರೆ ಮೊದಲು “ನವೀಕರಣ ಆಗಿಲ್ಲ” ಎಂದು ಹೇಳಿ, ನವೀಕರಣಕ್ಕೆ ₹100 ವೆಚ್ಚ ಮಾಡಿಸಿ 15 ದಿನಗಳ ಬಳಿಕ ಅನುಮತಿ ದೊರಕುತ್ತದೆ. ನಂತರ ವಿಳಾಸ ಬದಲಾವಣೆ ಅಥವಾ ಬೇರೆ ತಿದ್ದುಪಡಿ ಬೇಕಾದರೂ ಮತ್ತೆ ₹100 ಪಾವತಿಸಬೇಕು. ಇದಕ್ಕೂ ಮತ್ತೊಂದು 15 ದಿನಗಳ ಕಾಲ ಹಿಡಿಯುತ್ತಿದೆ. ಹೀಗಾಗಿ ಒಂದು ಕಾರ್ಡ್ ಸರಿಪಡಿಸಲು ಒಂದು ತಿಂಗಳ ಕಾಲ ಕಾಯಬೇಕಾಗುತ್ತದೆ. ಈ ಅವಧಿಯಲ್ಲಿ ಪರೀಕ್ಷೆಗಳ, ಶಿಷ್ಯವೇತನ, ಬ್ಯಾಂಕ್ ಸಾಲ ಅಥವಾ ಸರ್ಕಾರಿ ಅರ್ಜಿಗಳ ದಿನಾಂಕ ಮುಗಿಯುತ್ತಿದ್ದು, ಜನರು ಹತಾಶರಾಗುತ್ತಿದ್ದಾರೆ.

ಪಟ್ಟಣದಲ್ಲಿರುವ ಕೇಂದ್ರಗಳ ಕೊರತೆ ಹಾಗೂ ನಿರ್ವಹಣಾ ಸಮಸ್ಯೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಿಂಬರಗಾದ ಗ್ರಾಮಸ್ಥರೊಬ್ಬರು, “ನಮ್ಮ ಊರಿನ ಆಧಾರ್ ಕೇಂದ್ರ ತಿಂಗಳಿನಿಂದ ಮುಚ್ಚಿದೆ. ನಗರಕ್ಕೆ ಬಂದು ಅಪಾಯಿಂಟ್‌ಮೆಂಟ್ ಪಡೆದರೂ 20 ದಿನಗಳ ಬಳಿಕ ಹೋದರೆ ದಿನಾಂಕ ಮೀರಿರುತ್ತದೆ. ಶಿಷ್ಯವೇತನಕ್ಕೆ ಆಧಾರ್ ಮ್ಯಾಚ್ ಆಗದಿದ್ದರೆ, ಕುಟುಂಬದ ಆರ್ಥಿಕ ಭಾರ ಹೆಚ್ಚಾಗುತ್ತದೆ,” ಎಂದು ಅಳಲಿದರು.

ಗ್ರಾಮೀಣ ವಿದ್ಯಾರ್ಥಿಗಳು ದೂರದ ತಾಲೂಕು ಕೇಂದ್ರಗಳಿಗೆ ತೆರಳಿ ದಿನವಿಡೀ ಸರಣಿಯಲ್ಲಿ ನಿಲ್ಲುವಂತಾಗಿದೆ. ಇದರ ಪರಿಣಾಮವಾಗಿ 371 ಜೆ, ನೀಟ್, ಎಇಇ ಮತ್ತು ಇತರ ಪ್ರವೇಶ ಪರೀಕ್ಷೆಗಳ ಅರ್ಜಿಗಳು ತಡವಾಗುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಕನಸುಗಳು ಅಪೂರ್ಣವಾಗುತ್ತಿವೆ ಎಂದು ಅವರು ದೂರಿದರು.

ಚಾಲ್ತಿಯಲ್ಲಿರುವ ಆಧಾರ್ ಕೇಂದ್ರಗಳಲ್ಲೂ ಜನದಟ್ಟಣೆ ಹೆಚ್ಚಿದ್ದು, ತಾಂತ್ರಿಕ ತೊಂದರೆಗಳ ಕಾರಣಕ್ಕೆ “ನಂತರ ಬನ್ನಿ” ಎಂದು ಹೇಳುತ್ತಿದ್ದಾರೆ. “ಶಿಷ್ಯವೇತನ ಅರ್ಜಿಗಾಗಿ ಹೆಸರು, ಫೋಟೋ ಮ್ಯಾಚ್ ಆಗುತ್ತಿಲ್ಲ. ಅಪಾಯಿಂಟ್‌ಮೆಂಟ್ ಪಡೆದು ಬಂದರೂ ಕೇಂದ್ರ ತೆರೆದಿಲ್ಲ. ತೆರೆದ ದಿನ ಮಾತ್ರ ದಿನವಿಡೀ ಸರಣಿಯಲ್ಲಿ ನಿಲ್ಲಬೇಕಾಗಿದೆ. ರಜೆ ಹಾಕಿ ಬಂದರೂ ಒಂದು ದಿನದಲ್ಲಿ ತಿದ್ದುಪಡಿ ಆಗುತ್ತಿಲ್ಲ,” ಎಂದು ಕಾಲೇಜು ವಿದ್ಯಾರ್ಥಿಯೊಬ್ಬ ಹತಾಶನಾದರು.

ಯುಐಡಿಎಐ (Unique Identification Authority of India) ವ್ಯವಸ್ಥೆಯಲ್ಲಿ ಆನ್‍ಲೈನ್ ಅಪಾಯಿಂಟ್‌ಮೆಂಟ್ ಸೌಲಭ್ಯವಿದ್ದರೂ, ಕೇಂದ್ರಗಳ ನಿರ್ವಹಣಾ ಕೊರತೆಯಿಂದ ಅದು ನಿರರ್ಥಕವಾಗುತ್ತಿದೆ. ಇದರಿಂದ ಆನ್‍ಲೈನ್ ಮ್ಯುಟೇಷನ್, ಆಸ್ತಿ ನೋಂದಣಿ ಸೇರಿದಂತೆ ಹಲವು ಸರ್ಕಾರಿ ಸೇವೆಗಳು ತಡವಾಗುತ್ತಿವೆ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ, ಈ ವರ್ಷ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಶಿಷ್ಯವೇತನ ಅರ್ಜಿಗಳು ಆಧಾರ್ ಮ್ಯಾಚ್ ಸಮಸ್ಯೆಯಿಂದ ತಡವಾಗಿವೆ. ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರೂ, ನಿಯಮಿತ ಮೇಲ್ವಿಚಾರಣೆ ಕೊರತೆಯಿಂದ ಸ್ಥಳೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಸಾರ್ವಜನಿಕ ಸಂಘಟನೆಗಳು ಬೇಗ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿವೆ.

“ಆಧಾರ್ ಕೇಂದ್ರಗಳನ್ನು 24/7 ಕಾರ್ಯನಿರ್ವಹಿಸುವಂತೆ ಮಾಡಿ, ವಿದ್ಯಾರ್ಥಿಗಳಿಗೆ ವಿಶೇಷ ಸಮಯ ಮೀಸಲಿಡಬೇಕು” ಎಂದು ಆಗ್ರಹಿಸಲಾಗಿದೆ.

ತಕ್ಷಣದ ಪರಿಹಾರ ಅಗತ್ಯ: ಆಧಾರ್ ಕೇಂದ್ರಗಳ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ, ಆನ್‍ಲೈನ್ ತಿದ್ದುಪಡಿ ಸೌಲಭ್ಯ ವಿಸ್ತರಣೆ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶೇಷ ಡ್ರೈವ್ ಅಗತ್ಯವಾಗಿದೆ. ಸರ್ಕಾರವು ತ್ವರಿತ ಕ್ರಮ ಕೈಗೊಳ್ಳದೆ ಹೋದರೆ ವಿದ್ಯಾರ್ಥಿಗಳ ಭವಿಷ್ಯವೇ ಹಾನಿಗೊಳಗಾಗಲಿದೆ. ಜನರ ರೋಷ ಹೆಚ್ಚುವ ಮೊದಲು ವ್ಯವಸ್ಥೆ ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೇಲಾಧಿಕಾರಿಗಳ ಗಮನಕ್ಕೆ:ಆಧಾರ್ ಕೇಂದ್ರಗಳ ಹಳೆಯ ಏಜೆನ್ಸಿಗಳ ಅವಧಿ ಮುಗಿದಿದ್ದು, ಹೊಸ ಏಜೆನ್ಸಿಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ನೇರವಾಗಿ ಮೇಲಿನಿಂದಲೇ ಇದರ ನಿರ್ವಹಣೆ ನಡೆಯಲಿದೆ. ಈ ಕುರಿತು ಮಾಹಿತಿ ಸಂಗ್ರಹಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಕೆಲವಡೆ ಕೇಂದ್ರಗಳು ಚಾಲ್ತಿಯಲ್ಲಿವೆ; ಆಳಂದ, ನಿಂಬರಗಾ, ನರೋಣಾದ ಕೇಂದ್ರಗಳ ಬಗ್ಗೆ ಪರಿಶೀಲನೆ ನಡೆಯಲಿದೆ ಎಂದು ತಹಸೀಲ್ದಾರರು ತಿಳಿಸಿದರು. – ಅಣ್ಣಾರಾವ್ ಪಾಟೀಲ, ತಹಸೀಲ್ದಾರರು, ಆಳಂದ

Join WhatsApp

Join Now

Leave a Comment

error: Content is Protected!