ಬೆಂಗಳೂರು: ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ ಅವರು ಮತಗಳ್ಳತನ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನೆರವೇರಬೇಕಾದರೆ ರಾಜ್ಯ ಚುನಾವಣಾ ಆಯೋಗವು ಸಿಐಡಿಗೆ ಬೇಕಾದ ಎಲ್ಲಾ ಮಾಹಿತಿಯನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ನಾವು ಬೇಕಾದ ಎಲ್ಲಾ ದಾಖಲೆಗಳನ್ನು ನೀಡಿದ್ದೇವೆ” ಎಂಬ ಚುನಾವಣಾ ಆಯೋಗದ ಹೇಳಿಕೆ ತಪ್ಪು ಎಂದು ಖಂಡಿಸಿದರು.
2023ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪರವಾಗಿದ್ದ 6,018 ಮತದಾರರ ಹೆಸರುಗಳನ್ನು ಕೈಬಿಡಲು ಸುಳ್ಳು ಮನವಿಗಳು ಸಲ್ಲಿಕೆಯಾಗಿದ್ದವು ಎಂದು ಪಾಟೀಲ್ ಹೇಳಿದರು. ಈ ಬಗ್ಗೆ ತಕ್ಷಣವೇ ಅವರು 10-02-2023ರಂದು ಕಲಬುರಗಿ ಡಿಸಿ ಅವರಿಗೆ ಹಾಗೂ 13-02-2023ರಂದು ಆಳಂದ ತಹಶೀಲ್ದಾರರಿಗೆ ಪತ್ರ ಬರೆದಿದ್ದರು.
ಈ ಘಟನೆಯ ವರದಿ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ, ಚುನಾವಣಾ ಆಯೋಗವೇ ನಮ್ಮ ಆರೋಪದಲ್ಲಿ ಸತ್ಯವಿದೆ ಎಂದು ಒಪ್ಪಿಕೊಂಡು ಸ್ಥಿತಿಗತಿಯನ್ನು ಕಾಯ್ದುಕೊಳ್ಳುವಂತೆ ಆದೇಶ ನೀಡಿತ್ತು. ನಂತರ ನಕಲಿ ಮನವಿ ಸಲ್ಲಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಆಳಂದ ಚುನಾವಣಾಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಅವರು ವಿವರಿಸಿದರು.
ಮುಂದೆ, ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವಂತೆ ಗೃಹ ಸಚಿವ ಪರಮೇಶ್ವರ್ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, “ಸಿಐಡಿಗೆ ನಾವು 10 ಬಾರಿ ವಿಚಾರಿಸಿದರೂ, ಅವರಿಗೆ ಚುನಾವಣಾ ಆಯೋಗದಿಂದ ಸಹಕಾರ ಸಿಗುತ್ತಿಲ್ಲ” ಎಂದು ಪಾಟೀಲ್ ದೂರಿದರು. ಹೀಗಾಗಿ ಇದೀಗ ಈ ಪ್ರಕರಣವನ್ನು ಸೈಬರ್ ಅಪರಾಧ ವಿಭಾಗಕ್ಕೆ ನೀಡುವ ವಿಚಾರ ನಡೆಯುತ್ತಿದೆ ಎಂದರು.
“ನನ್ನ ಕ್ಷೇತ್ರದ ಸಾವಿರಾರು ಮತಗಳನ್ನು ತೆಗೆದುಹಾಕುವ ಮೂಲಕ ನನಗೆ ಸೋಲು ತರುವ ಕುತಂತ್ರ ರೂಪಿಸಲಾಗಿದೆ. ಈ ಸಂಚಿನ ಹಿಂದೆ ಬಿಜೆಪಿ ಮತ್ತು ಚುನಾವಣಾ ಆಯೋಗ ಕೈಜೋಡಿಸಿವೆ,” ಎಂದು ಬಿ.ಆರ್. ಪಾಟೀಲ್ ಗಂಭೀರ ಆರೋಪ ಹೊರಿಸಿದರು.









