ಆಳಂದ: ಸುಕ್ಷೇತ್ರ ನವಕಲ್ಯಾಣ ಜೀಡಗಾ ಶ್ರೀಮಠದಲ್ಲಿ ಲಿಂಗೈಕ್ಯ ಷ. ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಮಹಾಸ್ವಾಮಿಗಳ 97ನೇ ಜಯಂತೋತ್ಸವ ಗುರುವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಷಡಕ್ಷರಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಂದ ಸಾವಿರಾರು ಸದ್ಭಕ್ತರು ಸೇರಿ, ಶಿವಯೋಗಿಗಳ ದಿವ್ಯ ಶಕ್ತಿ ಮತ್ತು ಜಗದೋದ್ಧಾರಕ ಕಾರ್ಯವನ್ನು ಸ್ಮರಿಸಿದರು.
ಷಡಕ್ಷರಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಶ್ರೀ ಕೃಷ್ಣನ ನಂತರ ಈ ಭೂಮಿಯಲ್ಲಿ ಪದ್ಮಪಾದವನ್ನು ಹೊಂದಿದ ಅಪರೂಪದ ಯತಿರ್ವರರಾಗಿದ್ದರು. ಅವರ ಪಾದವನ್ನು ಮುಟ್ಟಿದ ಭಕ್ತರ ಬದುಕು ಪಾವನವಾಯಿತು. “ಜಗವೇಲ್ಲ ನಗುತೀರಲಿ, ಜಗದಳವು ತನಗೀರಲಿ” ಎಂಬ ಧ್ಯೇಯದೊಂದಿಗೆ ಜಗತ್ತನ್ನು ಉದ್ಧರಿಸಲು ಅವತರಿಸಿದ ಈ ಜಗದೋದ್ಧಾರಕರು, 76 ವರ್ಷಗಳ ಸಾರ್ಥಕ ಬದುಕನ್ನು ನಡೆಸಿ, ಶಿವನ ಇಚ್ಛೆಯಂತೆ ದೇಹತ್ಯಾಗ ಮಾಡಿ ತಮ್ಮ ಶಕ್ತಿಯನ್ನು ಈ ಕ್ಷೇತ್ರದ ಮಣ್ಣಿನ ಕಣಕಣದಲ್ಲಿ ಬಿಟ್ಟುಹೋಗಿದ್ದಾರೆ.
“ನುಡಿದಿದ್ದೆಲ್ಲ ನಡೆಯುತ್ತಿತ್ತು, ನಡೆಯುವದನ್ನೇ ನುಡಿಯುವ ಯೋಗಿಪುರುಷರಾಗಿದ್ದ ಶಿವಯೋಗಿಗಳು, ಕೋರಡು ಕೊಂಗುರಾಯಿತು, ಬರಡಾದ ಭೂಮಿ ಹಸಿರಾಯಿತು, ವಿಷವು ಅಮೃತವಾಯಿತು, ಬಂಜೆತನವು ತಾಯ್ತನಕ್ಕೆ ಪರಿವರ್ತನೆಯಾಯಿತು” ಎಂದು ಭಕ್ತರು ಅವರ ದಿವ್ಯ ಶಕ್ತಿಯನ್ನು ಸ್ಮರಿಸಿದರು.
ಷಡಕ್ಷರಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು, “ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಈ ನಾಡಿಗೆ ಅವತರಿಸಿದ ಶತಮಾನದ ಶ್ರೇಷ್ಠ ಸಂತರು. ಅವರು ಪ್ರತಿ ಮನೆಯ ಸದ್ಭಕ್ತರಿಗೆ ತಾಯಿಯ ಪ್ರೀತಿಯನ್ನು ನೀಡಿದ್ದರು. ಬಡವನಾಗಲಿ, ಶ್ರೀಮಂತನಾಗಲಿ, ಎಲ್ಲರನ್ನೂ ಒಂದೇ ಪ್ರೀತಿಯಿಂದ ಕಂಡ ಶಿವಯೋಗಿಗಳ ಆದರ್ಶವನ್ನು ಪಾಲಿಸಿದ ಭಕ್ತರು ಪುಣ್ಯವಂತರು.” ಶಿವಯೋಗಿಗಳ ತಾರತಮ್ಯರಹಿತ ನೀತಿಯು ಇಂದಿಗೂ ಸಮಾಜಕ್ಕೆ ಆದರ್ಶವಾಗಿದೆ ಎಂದು ಅವರು ಒತ್ತಿ ಹೇಳಿದರು.
ವಿಶೇಷವಾಗಿ, ಈ ಭಾಗದ ರೈತರ ಕಷ್ಟಗಳನ್ನು ಸ್ಮರಿಸುತ್ತಾ ಅವರು ಹೇಳಿದರು, “ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಕಷ್ಟವನ್ನು ಅನುಭವಿಸುತ್ತಿದ್ದಾರೆ. ರೈತನ ನೋವು ನಮ್ಮೆಲ್ಲರ ನೋವು. ಆದರೆ ಯಾವುದಕ್ಕೂ ಕುಗ್ಗದೆ, ಶಿವಯೋಗಿ ಸಿದ್ದರಾಮಯ್ಯರ ಆಶೀರ್ವಾದ ಶಕ್ತಿಯೊಂದಿಗೆ ಧೈರ್ಯದಿಂದ ಮುಂದುವರಿಯಬೇಕು. ಅವರ ದಿವ್ಯ ಶಕ್ತಿಯು ರೈತರ ಹೊಲವನ್ನು ಹಸಿರಾಗಿಸಿ, ಸಮೃದ್ಧಿಯನ್ನು ತರುತ್ತದೆ” ಎಂದು ಆತ್ಮವಿಶ್ವಾಸದ ಸಂದೇಶ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ, ಪರಮ ಪೂಜ್ಯ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳ ಜಾಗೃತ ಗದ್ದುಗೆಗೆ ಮಹಾರುದ್ರಾಭಿಷೇಕವನ್ನು ನೆರವೇರಿಸಿದರು. ನಂತರ, ಶ್ರೀಮಠದ ಬ್ರಹ್ಮ ವೇದಿಕೆಯಲ್ಲಿ ಧರ್ಮಸಭೆಯಲ್ಲಿ ಭಾಗವಹಿಸಿದ ಶ್ರೀಗಳು, ಶಿವಯೋಗಿಗಳ ಬಂಗಾರದ ಮೂರ್ತಿಯನ್ನು ತೊಟ್ಟಿಲಲ್ಲಿ ತೂಗುವ ಭಕ್ತಿಪೂರ್ವಕ ಸೇವೆಯನ್ನು ನೆರವೇರಿಸಿದರು. ಸದ್ಭಕ್ತರು ಶ್ರೀಗಳಿಗೆ ತುಲಾಭಾರ ಸೇವೆ ಸಲ್ಲಿಸಿ ತಮ್ಮ ಭಕ್ತಿಯನ್ನು ಅರ್ಪಿಸಿದರು.
ಸುಕ್ಷೇತ್ರ ನವಕಲ್ಯಾಣ ಜೀಡಗಾ ಶ್ರೀಮಠವು ಕೇವಲ ಧಾರ್ಮಿಕ ಕೇಂದ್ರವಲ್ಲ, ಸಾಮಾಜಿಕ ಸೇವೆಯ ಕೇಂದ್ರವೂ ಆಗಿದೆ. ಶಿವಯೋಗಿಗಳ ಆದರ್ಶದಂತೆ, ಮುಂದಿನ ದಿನಗಳಲ್ಲಿ ಈ ಮಠವು ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವ ಮೂಲಕ ರೈತರಿಗೆ ಮತ್ತು ಸಮಾಜದ ಎಲ್ಲಾ ವರ್ಗದವರಿಗೆ ಆಶಾಕಿರಣವಾಗಿ ಬೆಳಗಲಿದೆ ಎಂದು ಭರವಸೆ ನೀಡಿದರು.
ಜಾನಪದ ಕಲಾವಿದ ನಸಿರವಾಡಿಯ ತಾತ್ಯರಾವ್ ಪಾಟೀಲರಿಗೆ ಜೀಡಗಾ ಶ್ರೀಮಠದ ಶಿವಯೋಗಿ ಗಾನಗಾರುಡಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಹೇಳಿದರು, “ಈ ಭಾಗದಲ್ಲಿ ಭವ್ಯವಾಗಿ ಶಿಕ್ಷಣ, ಕೃಷಿ ಮತ್ತು ಧಾರ್ಮಿಕವಾಗಿ ದೊಡ್ಡ ಪ್ರಮಾಣದಲ್ಲಿ ಮುನ್ನಡೆಯುತ್ತಿರುವ ಶ್ರೀಮಠದ ಎಲ್ಲಾ ಕಾರ್ಯಗಳಲ್ಲಿ ನಾವು ಭಾಗಿಯಾಗುತ್ತೇವೆ.
“ವೇದಿಕೆಯಲ್ಲಿ ಚಿನ್ನಮಗಿರಿ ಮಠದ ವೀರಮಹಾಂತ ಸ್ವಾಮೀಗಳು, ನಿಂಬರಗಾ ಮಠದ ಶಿವಲಿಂಗ ಮಹಾಸ್ವಾಮಿಗಳು ಜೀಡಗಾ ಶ್ರೀಗಳ ಕಾರ್ಯವನ್ನು ಸ್ಮರಿಸಿದರು.









