ಆಳಂದ: ಗ್ರಾಮೀಣ ಜನರ ಆರ್ಥಿಕ ಸಬಲೀಕರಣದಲ್ಲಿ ನೂತನ ದಿಕ್ಕು ತೋರಿಸುತ್ತಿರುವ ಸರಸಂಬಾದ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ 23ನೇ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ಗ್ರಾಮದ ಶ್ರೀ ದಯಲಿಂಗೇಶ್ವರ ಆಶ್ರಮದಲ್ಲಿ ಅರ್ಥಪೂರ್ಣವಾಗಿ ಮತ್ತು ಸಮಾಜಮುಖಿಯಾಗಿ ನೆರವೇರಿತು.
ಸಂಸ್ಥಾಪಕ ಅಧ್ಯಕ್ಷ ದಿ. ಮಹಾಂತಪ್ಪ ಆಲೂರೆ ಅವರ ತ್ಯಾಗ, ಶ್ರಮ ಮತ್ತು ದೃಢನಿಷ್ಠೆಯಿಂದ ಬೆಳೆದ ಈ ಸಂಘವು, ಅವರ ನಿಧನದ ನಂತರವೂ ಪತ್ನಿ ರತ್ನಬಾಯಿ ಆಲೂರೆ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿರುವುದು ಸಭೆಯ ಪ್ರಮುಖ ಚರ್ಚೆಯ ಅಂಶವಾಗಿತ್ತು. ಸಂಘದ ಸಾಧನೆಗೆ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರು, “ಶ್ರೀ ಧನಲಕ್ಷ್ಮೀ ಸೌಹಾರ್ದ ಸಂಘವು ತಾಲೂಕಿನ ಐದು ಶಾಖೆಗಳ ಮೂಲಕ ಆರ್ಥಿಕ ಕ್ರಾಂತಿ ತಂದಿದ್ದು, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಗ್ರಾಹಕ ಸ್ನೇಹಿ ಕಾರ್ಯಗಳಲ್ಲಿ ಮಾದರಿಯಾಗಿದೆ. ಪ್ರತಿಯೊಬ್ಬ ಸದಸ್ಯರು ಪಡೆದ ಸಾಲವನ್ನು ಸಮಯಕ್ಕೆ ಮರುಪಾವತಿಸಿದರೆ ಸಂಘ ಇನ್ನಷ್ಟು ಬಲವಾಗಿ ಬೆಳೆದು ಮತ್ತೊಬ್ಬರಿಗೆ ಸಹಕಾರಿ ಆಗಲು ಸಾಧ್ಯ. ಈ ಸಂಸ್ಕೃತಿ ರೂಢಿಸಿಕೊಳ್ಳಬೇಕಿದೆ” ಎಂದು ಸಲಹೆ ನೀಡಿದರು.
ಚಿಣಮಗೇರಾ ಮಠದ ಶ್ರೀ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರು, “ಸೌಹಾರ್ದ ಸಹಕಾರಿ ಸಂಘಗಳು ಗ್ರಾಮೀಣ ಆರ್ಥಿಕತೆಗೆ ಪೂರಕ. ಶ್ರೀ ಧನಲಕ್ಷ್ಮೀ ಸಂಘವು ಸಮಾಜಕ್ಕೆ ಮಾದರಿಯಾಗಿದ್ದು, ಒಗ್ಗಟ್ಟಿನಿಂದಲೇ ಸತತ ಪ್ರಗತಿ ಸಾಧ್ಯ” ಎಂದರು.
ರಾಜ್ಯ ನಿರ್ದೇಶಕಿ ಶೈಲಜಾ ತಪ್ಲಿ ಅವರು, “ರತ್ನಬಾಯಿ ಆಲೂರೆ ಅವರ ನಾಯಕತ್ವದಲ್ಲಿ ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ. ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೆ ಈ ಸಂಘ ಗಮನಾರ್ಹ ಸಾಧನೆ ಮಾಡಿದೆ” ಎಂದರು.
ಇನ್ನೂರ್ವ ನಿರ್ದೇಶಕ ಸಂಜೀವ್ ಮಹಾಜನ್ ಅವರು, “ಸಹಕಾರಿ ಸಂಘಗಳ ಗುರಿ ಸಮಾಜದ ಕೊನೆಯ ವ್ಯಕ್ತಿಯನ್ನೂ ತಲುಪುವುದೇ. ಈ ಸಂಘದ ಸಮಾಜಮುಖಿ ಕಾರ್ಯಕ್ರಮಗಳು ಇತರರಿಗೆ ಸ್ಫೂರ್ತಿಯಾಗಿದೆ” ಎಂದರು.

ಕಲಬುರಗಿಯ ಸುರೇಶ್ ಬಡಿಗೇರ್ ಅವರು ಉಪನ್ಯಾಸ ನೀಡಿ, “ಗ್ರಾಮೀಣ ಜನರಿಗೆ ಸ್ವಾವಲಂಬನೆ ತರಲು ಸಹಕಾರಿ ಸಂಘಗಳು ಪ್ರಮುಖ. ಶ್ರೀ ಧನಲಕ್ಷ್ಮೀ ಸಂಘವು ಜಿಲ್ಲೆಯ ಇತರ ಸಂಘಗಳಿಗೆ ಮಾದರಿಯಾಗಿದೆ” ಎಂದು ಹೇಳಿದರು.
ಸಭೆಯ ವಿಶೇಷತೆಗಳು: ನಿಧನರಾದ ಸದಸ್ಯರ ಕುಟುಂಬಗಳಿಗೆ ಮರಣಾಂತರ ನಿಧಿ ಚೆಕ್ ವಿತರಣೆ. ಉತ್ತಮ ಗ್ರಾಹಕರಿಗೆ ಗೌರವ ಪುರಸ್ಕಾರ. ಶೈಕ್ಷಣಿಕ ಸಾಧಕರಿಗೆ ನಗದು ಬಹುಮಾನ. ವಾರ್ಷಿಕ ನಿವ್ವಳ ಲಾಭ ವರದಿಯನ್ನು ಮಂಡಿಸಿ ಅನುಮೋದಿಸಲಾಯಿತು.
51.50 ಲಕ್ಷ ನಿವ್ವಳ ಲಾಭ: ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಚಳವಳಿಗೆ ಮಾದರಿಯಾಗಿ ಹೊರಹೊಮ್ಮಿರುವ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ತನ್ನ ವಾರ್ಷಿಕ ವ್ಯವಹಾರದಲ್ಲಿ ಒಟ್ಟು 1.50 ಕೋಟಿ ರೂಪಾಯಿ ಲಾಭ ದಾಖಲಿಸಿದ್ದು, ಅದರಲ್ಲಿ 51.50 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ.
ಸಂಘವು ಪ್ರಸ್ತುತ 14 ಕೋಟಿ ರೂಪಾಯಿ ಬಂಡವಾಳದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 4 ಸಾವಿರ ಸದಸ್ಯರನ್ನು ತನ್ನಲ್ಲಿಗೆ ಸೆಳೆದಿದೆ. ಗ್ರಾಮೀಣ ಜನರ ಆರ್ಥಿಕ ಬಲವರ್ಧನೆ ಹಾಗೂ ಸಾಂಘಿಕ ಏಳಿಗೆಗಾಗಿ ಸತತವಾಗಿ ವಿವಿಧ ಯೋಜನೆಗಳು ಮತ್ತು ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಈ ಸಾಧನೆಯ ಮೂಲ ಕಾರಣವಾಗಿದೆ.

ಸಂಘವು ವಾಣಿಜ್ಯ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಸತತ ಸೇವಾ ಚಟುವಟಿಕೆಗಳನ್ನು ಮುನ್ನಡೆಸುತ್ತಿರುವುದರಿಂದ ಲಾಭದಲ್ಲಿ ಕುಸಿತವಾಗಬಹುದು ಎಂಬ ನಿರೀಕ್ಷೆಯಿದ್ದರೂ, ನಿಜವಾದ ಅಂಕಿಅಂಶಗಳು ನಿರೀಕ್ಷೆಗಿಂತ ಹೆಚ್ಚು ನಿವ್ವಳ ಲಾಭವನ್ನು ತೋರಿಸಿರುವುದು ವಿಶಿಷ್ಟ ಸಾಧನೆಯಾಗಿದೆ.
ಮುಂದಿನ ವರ್ಷಗಳಲ್ಲಿ ಸಂಘವು ಇನ್ನಷ್ಟು ಸಶಕ್ತವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು.
ಸೋಮನಾಥ ನಿಂಬರಗಿ – ಕಾರ್ಯದರ್ಶಿ, ಶ್ರೀ ಧನಲಕ್ಷ್ಮೀ ಸೌ.ಸ.ಸಂಘ









