ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಆಳಂದ ಪುರಸಭೆ ನಗರಸಭೆ ಮೇಲ್ದರ್ಜೆಗೇರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ – ಇಂದಿರಾ ಕ್ಯಾಂಟಿನ್ ಉದ್ಘಾಟನೆಯಿಂದ ಪಟ್ಟಣದ ಅಭಿವೃದ್ಧಿಗೆ ಹೊಸ ದಿಕ್ಕು: ಸಚಿವ ರಹೀಂ ಖಾನ್ ಭರವಸೆ.

On: September 8, 2025 7:20 PM

ಆಳಂದ: ಪಟ್ಟಣವು ಮುಂದಿನ ದಿನಗಳಲ್ಲಿ ನಗರಸಭೆ ಸ್ಥಾನಮಾನ ಪಡೆದು, ಅಭಿವೃದ್ಧಿಯ ಹೊಸ ಯುಗಕ್ಕೆ ಕಾಲಿಡಲಿದೆ. ಪಟ್ಟಣದ ಜನಸಂಖ್ಯೆ ಹಾಗೂ ವ್ಯಾಪ್ತಿಯ ಆಧಾರದ ಮೇಲೆ ಆಳಂದ ಪುರಸಭೆಯನ್ನು ನಗರಸಭೆಗೆ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರಾಜ್ಯದ ಪೌರಾಡಳಿತ ಮತ್ತು ಹಜ್ ಇಲಾಖೆಯ ಸಚಿವ ರಹೀಂ ಖಾನ್ ಭರವಸೆ ನೀಡಿದರು.

ಸೋಮವಾರ ಪಟ್ಟಣದ ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ರಾಜ್ಯ ಹಣಕಾಸು ಆಯೋಗ (2024-25ನೇ ಸಾಲು) ಅನುದಾನದಲ್ಲಿ 87 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಇಂದಿರಾ ಕ್ಯಾಂಟಿನ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸಂದರ್ಭ ಪಟ್ಟಣದ ಅಭಿವೃದ್ಧಿ, ಜನಸಾಮಾನ್ಯರ ಸೌಲಭ್ಯಗಳು ಹಾಗೂ ಬಡವರ ಪರ ಕಲ್ಯಾಣ ಯೋಜನೆಗಳ ಕುರಿತು ಮಹತ್ವದ ಭರವಸೆಗಳನ್ನು ನೀಡಿದರು.

ನಗರಸಭೆ ಹಂತಕ್ಕೆ ಏರಿದರೆ ಅಭಿವೃದ್ಧಿಯ ವೇಗ ಹೆಚ್ಚಲಿದೆ

“ಆಳಂದ ಪುರಸಭೆ ನಗರಸಭೆ ಹಂತಕ್ಕೆ ಏರಿದರೆ ಹೆಚ್ಚಿನ ಸಿಬ್ಬಂದಿ, ಸಮರ್ಪಕ ಅನುದಾನ ಹಾಗೂ ಯೋಜನೆಗಳ ನಿರ್ವಹಣೆ ಸುಗಮವಾಗಲಿದೆ. ಜನಸಾಮಾನ್ಯರ ಅಗತ್ಯಗಳಿಗೆ ಸ್ಪಂದಿಸುವ ಮೂಲಸೌಕರ್ಯ ಕಲ್ಪಿಸಲು ಇದು ಪ್ರಮುಖ ಹೆಜ್ಜೆಯಾಗಲಿದೆ” ಎಂದು ಸಚಿವರು ಸ್ಪಷ್ಟಪಡಿಸಿದರು.

ಅವರು ಮುಂದುವರಿದು, “ಆಳಂದ ಮುಖ್ಯರಸ್ತೆ ಅಗಲೀಕರಣಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಿರುವುದು ಮಹತ್ತರ ನಿರ್ಧಾರ. ಅಲ್ಲದೆ, 5 ಕೋಟಿ ವೆಚ್ಚದಲ್ಲಿ ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ಇಲ್ಲಿ ಸ್ಥಾಪಿಸಲಾದ ಘನತ್ಯಾಜ್ಯ ಘಟಕ ರಾಜ್ಯಕ್ಕೆ ಮಾದರಿಯಾಗಿದೆ; ಇದನ್ನು ರಾಜ್ಯದ ಇತರೆ ಭಾಗಗಳಿಗೂ ವಿಸ್ತರಿಸುವ ಯೋಜನೆ ಇದೆ” ಎಂದರು.

ಪಂಚಗ್ಯಾರೆಂಟಿ ಯೋಜನೆಗಳಿಂದ ಬಡವರ ಬದುಕಿಗೆ ಬೆಳಕು

ಸಚಿವ ರಹೀಂ ಖಾನ್ ಅವರು, “ಪಂಚಗ್ಯಾರೆಂಟಿ ಯೋಜನೆಗಳು ಬಡವರ ಬದುಕನ್ನು ಬದಲಾಯಿಸುತ್ತಿವೆ. ರಾಜ್ಯ ಸರ್ಕಾರ ಬಡವರ ಪರ ಹಿತಚಿಂತನೆಯೊಂದಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಶಾಸಕರಾದ ಬಿ.ಆರ್. ಪಾಟೀಲರ ವಿನಂತಿಗೆ ಮುಖ್ಯಮಂತ್ರಿ ಸದಾ ಸ್ಪಂದಿಸುತ್ತಿದ್ದಾರೆ. ಶಾಸಕರು ಅಭಿವೃದ್ಧಿ ಪರವಾದ ನಿಲುವನ್ನು ತಾಳಿರುವುದರಿಂದ ಆಳಂದ ಕ್ಷೇತ್ರಕ್ಕೆ ನಿರಂತರವಾಗಿ ಸೌಲಭ್ಯಗಳು ದೊರೆಯುತ್ತಿವೆ” ಎಂದು ಹೇಳಿದರು.

ಶಾಸಕ ಬಿ.ಆರ್. ಪಾಟೀಲರ ದೃಢ ನಿಲುವು

ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್. ಪಾಟೀಲ ಅವರು, “ಮುಖ್ಯರಸ್ತೆ ಅಗಲೀಕರಣ ಯಾವ ಕಾರಣಕ್ಕೂ ನಿಲ್ಲದು, ಇದು ಮಾಡಿಯೇ ತೀರಲಿದೆ. ಶ್ರೀರಾಮ ಮಾರುಕಟ್ಟೆಯ ಹಳೆಯ ಕಟ್ಟಡ ತೆರವುಗೊಳಿಸಿ, ಎರಡು ಅಂತಸ್ತಿನ ನೂತನ ಕಟ್ಟಡ ನಿರ್ಮಿಸಿ ವ್ಯಾಪಾರ ವಹಿವಾಟಿಗೆ ಅನುಕೂಲ ಕಲ್ಪಿಸಲಾಗುವುದು. ಎಪಿಎಂಸಿ ನಿವೇಶನದಲ್ಲಿ ವಾರದ ಸಂತೆಗೆ ವ್ಯವಸ್ಥೆ ಮಾಡಲಾಗುವುದು. ಹಳೆಯ ಚೆಕ್‌ಪೋಸ್ಟ್‌ನಿಂದ ಸಿದ್ಧಾರ್ಥ ಚೌಕವರೆಗೆ 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಅನುದಾನ ಮೀಸಲಾಗಿದೆ” ಎಂದು ಘೋಷಿಸಿದರು.

ಇಂದಿರಾ ಕ್ಯಾಂಟಿನ್ – ಬಡವರಿಗೆ ಅನ್ನಸಂತಾರ್ಪಣಭವ

ಒಟ್ಟು 130 ಲಕ್ಷ ರೂ.ಗಳ ಅನುದಾನದಲ್ಲಿ ಇಂದಿರಾ ಕ್ಯಾಂಟಿನ್ ಯೋಜನೆ ಪೂರ್ಣಗೊಂಡಿದ್ದು, ಕಟ್ಟಡ ನಿರ್ಮಾಣಕ್ಕೆ 87 ಲಕ್ಷ, ಅಡುಗೆ ಸಾಮಗ್ರಿಗಳಿಗೆ 35 ಲಕ್ಷ ಹಾಗೂ ಕಂಪೌಂಡ್ ಗೋಡೆಗೆ 8 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ. ಇದರಿಂದ ಪಟ್ಟಣದಲ್ಲಿ ಬಡಜನರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಅಗ್ಗದ ದರದಲ್ಲಿ ಆಹಾರ ದೊರೆಯಲಿದೆ.

ಸ್ವಚ್ಛತೆ, ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ಪಟ್ಟಣದ ಸ್ವಚ್ಛತೆಗಾಗಿ ಸ್ವಚ್ಛ ಭಾರತ ಮಿಷನ್ (2.0) ಅಡಿಯಲ್ಲಿ ಹಲವು ಕ್ರಮ ಕೈಗೊಳ್ಳಲಾಗಿದೆ. ದರ್ಗಾಬೇಸ್ ಹತ್ತಿರ ಶೌಚಾಲಯ ನಿರ್ಮಾಣಕ್ಕೆ 18 ಲಕ್ಷ ರೂ., ಮೂತ್ರಾಲಯಕ್ಕೆ 2.5 ಲಕ್ಷ ರೂ., ಘನತ್ಯಾಜ್ಯ ನಿರ್ವಹಣೆಗೆ 30 ಲಕ್ಷ ರೂ. ವೆಚ್ಚದಲ್ಲಿ ವಾಹನಗಳನ್ನು ಖರೀದಿಸಲಾಗಿದೆ. ಇದರಿಂದ ಪಟ್ಟಣದ ಸ್ವಚ್ಛತೆ ಕಾರ್ಯ ರಾಜ್ಯಮಟ್ಟದ ಮಾದರಿಯಾಗಲಿದೆ.

ಸೌಲಭ್ಯಗಳ ವಿತರಣೆವಿದ್ಯಾರ್ಥಿಗಳಿಗೆ ಲ್ಯಾಪಟಾಪ್, ಬಡವರಿಗೆ ನೆರವು

ಕಾರ್ಯಕ್ರಮದಲ್ಲಿ ಪುರಸಭೆ ಅನುದಾನದಲ್ಲಿ ನಾಲ್ವರು ಸ್ನಾತಕೋತ್ತರ ಪದವೀಧರರಿಗೆ ತಲಾ 15 ಸಾವಿರ ರೂ.ಗಳ ಸಹಾಯಧನ ನೀಡಲಾಯಿತು. ಪ್ರತಿಭಾನ್ವಿತ 6 ಬಿ.ಇ ಹಾಗೂ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಿಸಲಾಯಿತು. ಬೀದಿ ಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯಡಿ ಡಿಜಿಟಲ್ ಕಾರ್ಡ್, ಜೀವ ವಿಮೆ ಪ್ರಮಾಣ ಪತ್ರ ಹಾಗೂ ವಿವಿಧ ದಾಖಲೆಗಳನ್ನು ವಿತರಿಸಲಾಯಿತು. ಸ್ವಸಹಾಯ ಗುಂಪುಗಳಿಗೆ ಪುಸ್ತಕ ಹಂಚಿಕೆ ಮಾಡಲಾಯಿತು.

ಈ ಸಮಾರಂಭದಲ್ಲಿ ಪೌರಾಡಳಿತ ಕಲಬುರಗಿ ಯೋಜನಾ ನಿರ್ದೇಶ ಮುನಾವರ ದೌಲಾ, ಪುರಸಭೆ ಅಧ್ಯಕ್ಷ ಫೀರದೋಸ್ ಅನ್ಸಾರಿಗೌಡಾ, ಉಪಾಧ್ಯಕ್ಷೆ ಕವಿತಾ ಎಸ್. ನಾಯಕ, ತಹಸೀಲ್ದಾರ ಅಣ್ಣಾರಾವ್ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಇಒ ಮಾನಪ್ಪ ಕಟ್ಟಿಮನಿ, ಪುರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಪಟ್ಟಣ-ಗ್ರಾಮೀಣ ಭಾಗದ ಸಾವಿರಾರು ನಾಗರಿಕರು ಭಾಗವಹಿಸಿದರು.

Join WhatsApp

Join Now

Leave a Comment

error: Content is Protected!