ಆಳಂದ: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಗಂಭೀರವಾಗಿ ಮುಂದಾಗಿದ್ದು, ಒಟ್ಟು 2,736 ಅಧಿಕಾರಿ ಹಾಗೂ ನೌಕರರ ನೇಮಕಾತಿಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ 5 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿ ಆಯೋಜಿಸಿದ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಲವರ್ಧನೆಗಾಗಿ ಮಾನವ ಸಂಪನ್ಮೂಲ ಹೆಚ್ಚಿಸುವುದು ಅವಶ್ಯಕವಾಗಿದ್ದು, ಇದನ್ನು ಸರ್ಕಾರ ತುರ್ತು ಅಗತ್ಯವೆಂದು ಪರಿಗಣಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಂಸ್ಥೆಗೆ ಚಾಲಕರು, ನಿರ್ವಾಹಕರೆ ಆಧಾರ ಸ್ಥಂಭ. ಅವರಿಲ್ಲದೆ ಬಸ್ ಕಾರ್ಯಚರಣೆ ಅಸಾಧ್ಯ. 2016 ರಿಂದ 2023ರ ವರೆಗೆ ನೇಮಕಾತಿ ಮಾಡದ ಕಾರಣ ಮಾನವ ಸಂಪನ್ಮೂಲ ಸಮಸ್ಯೆಯಾಗಿತ್ತು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಸ್ಥೆಯಲ್ಲಿ 1,000 ಅನುಕಂಪ ಸೇರಿ ಇದೂವರೆಗೆ 10 ಸಾವಿರ ನೌಕರರ ನೇಮಕಾತಿ ಮಾಡಿದ್ದೇವೆ ಎಂದರು.
ರಾಜ್ಯದ 4 ಸಾರಿಗೆ ಸಂಸ್ಥೆಗಳ ಪೈಕಿ ಉತ್ತಮ ಹಣಕಾಸಿನ ಪರಿಸ್ಥಿತಿ ಹೊಂದಿರುವುದು ಇಲ್ಲಿನ ಕೆ.ಕೆ.ಅರ್.ಟಿ.ಸಿ. ಮಾತ್ರ. ಅಳಂದ ಬಸ್ ನಿಲ್ದಾಣ ನಿರ್ಮಾಣಕ್ಕೆ 5 ಕೋಟಿ ರೂ. ಸಾಕಾವುದಿಲ್ಲ. ಒಮ್ಮೆ ಕೆಲಸ ಆರಂಭವಾದ ನಂತರ ಹೆಚ್ಚಿನ ಅನುದಾನ ಸಹ ನೀಡಲಾಗುವುದು. ಕಳೆದ ಎರಡು ವರ್ಷದ ಅವಧಿಯಲ್ಲಿ ಈ ಸಂಸ್ಥೆಗೆ 1,031 ಬಸ್ ಒದಗಿಸಿದ್ದೇವೆ. ಪ್ರಸಕ್ತ ವರ್ಷ ಕೆ.ಎಸ್.ಆರ್.ಟಿ.ಸಿ.ಗೆ 900, ವಾಯುವ್ಯ ಸಾರಿಗೆಗೆ 700, ಕಲ್ಯಾಣ ಕರ್ನಾಟಕ ಸಾರಿಗೆಗೆ 400 ಬಸ್ ನೀಡಿದ್ದೇವೆ. ಜನಸಂಖ್ಯೆ ಹೆಚ್ಚಳ, ಪ್ರಯಾಣಿಕರ ಓಡಾಟ ಹೆಚ್ಚಿದ್ದರಿಂದ ಇಲ್ಲಿನ ಸಂಸ್ಥೆಗೆ ಹೆಚ್ಚಿನ ಬಸ್ ಖರೀದಿಸಲು ಕೆ.ಕೆ.ಆರ್.ಡಿ.ಬಿ. ಮಂಡಳಿಗೆ ಅರ್ಥಿಕ ನೆರವು ಕೋರಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಶಕ್ತಿ ಯೋಜನೆಯ ಪರಿಣಾಮ ಇದುವರೆಗೆ ದಿನಕ್ಕೆ 65 ಲಕ್ಷ ಸರಾಸರಿಯಂತೆ 517 ಕೋಟಿಗೂ ಅಧಿಕ ಬಾರಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ಇದಕ್ಕಾಗಿ ಸರ್ಕಾರ 13 ಸಾವಿರ ಕೋಟಿ ಭರಿಸಿದೆ. ಶಾಸಕ ಬಿ.ಆರ್.ಪಾಟೀಲ ಅವರು ಪ್ರಸ್ತಾಪಿಸಿದಂತೆ ಸಿಎಂ ಅವರ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವುದು ಎಂದರು.
ಬೀದರ ಸಂಸದ ಸಾಗರ ಖಂಡ್ರೆ ಮಾತನಾಡಿ, ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿಸಲು ನಿಗಮದಿಂದ ಗಡಿ ಭಾಗದಲ್ಲಿ ಇನ್ನಷ್ಟು ಬಸ್‍ಗಳನ್ನು ಪೂರೈಸಿ ಸಮಯಕ್ಕೆ ಪ್ರಯಾಣಿಸುವಂತೆ ಕ್ರಮ ಕೈಗೊಳ್ಳಬೇಕು ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಚಿವರಲ್ಲಿ ಕೊರಿದರು.
20 ಬಸ್ ಕೊಡ್ರಿ: ಶಾಸಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಮಾತನಾಡಿ ಆಳಂದ ತಾಲೂಕು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವುದರಿಂದ ಇಲ್ಲಿಂದ ನೆರೆ ರಾಜ್ಯಕ್ಕೆ ಪ್ರಯಾಣಿಕರ ಓಡಾಟ ಹೆಚ್ಚಿದೆ. ಹೀಗಾಗಿ ಆಳಂದ ಘಟಕಕ್ಕೆ ಹೆಚ್ಚುವರಿಯಾಗಿ 20 ಬಸ್ ನೀಡಬೇಕು ಮತ್ತು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಗಡಿ ಭಾಗದ ವರೆಗೂ ಎಲ್ಲಾ ಬಸ್ ನಲ್ಲಿಯೂ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕೆಂದು ಸಚಿವ ರಾಮಲಿಂಗಾರೆಡ್ಡಿ ಅವರಲ್ಲಿ ಮನವಿ ಮಾಡಿಕೊಂಡರು.
ಆಳಂದ ಬಸ್ ನಿಲ್ದಾಣ 40 ವರ್ಷ ಹಳೆಯದಾಗಿದ್ದು, ತೆಗ್ಗು ಪ್ರದೇಶದಲ್ಲಿ ಇರುವ ಕಾರಣ ಮಳೆ ನೀರು ನಿಂತು ಕೆಟ್ಟು ಹೋಗಿದೆ. ಇದೀಗ ಶಂಕುಸ್ಥಾಪನೆ ನೆರವೇರಿಸಿದ್ದು, ಮುಂದೆ 10 ತಿಂಗಳಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರಿಂದಲೆ ಇದನ್ನು ಸಾರ್ವಜನಿಕರಿಗೆ ಸಮರ್ಪಿಸಲಾಗುವುದು. ಇನ್ನು ತಾಲೂಕಿನ ಮಾದನಹಿಪ್ಪರಗಾ, ನಿಂಬಾಳ, ಹಿರೊಳ್ಳಿ, ಖಜೂರಿ, ಕಡಗಂಚಿಯಲ್ಲಿಯೂ ಬಸ್ ನಿಲ್ದಾಣ ಹೊಸದಾಗಿ ನಿರ್ಮಿಸಬೇಕು ಎಂದ ಅವರು, ರಾಜ್ಯದ ಸಾರಿಗೆ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿದೆ. ಗಡಿ ಭಾಗ ಇದಾಗಿರುವುದರಿಂದ ಮಹಾರಾಷ್ಟ್ರಕ್ಕೆ ಹೋಗಲು ರಾಜ್ಯದ ಬಸ್ ಗಳನ್ನೆ ಇಲ್ಲಿನ ಜನ ಅವಲಂಬಿಸಿದ್ದಾರೆ. ಹೀಗಾಗಿ ಬಸ್ ಸೌಕರ್ಯ ಹೆಚ್ಚಿಸುವ ಅವಶ್ಯಕತೆ ಇದೆ ಎಂದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಆಳಂದ ಬಸ್ ನಿಲ್ದಾಣ ಸುಸಜ್ಜಿತವಾಗಿ ನಿರ್ಮಾಣವಾಗಬೇಕು. ಇದೀಗ 5 ಕೋಟಿ ರೂ. ಅನುದಾನ ನೀಡಲಿದೆ. ಇನ್ನು ಅನುದಾನ ಹೆಚ್ಚು ಬೇಕಾದರೆ ಕೆ.ಕೆ.ಆರ್.ಡಿ.ಬಿ. ಅನುದಾನ ನೀಡಲಾಗುವುದು. ಕಾಮಗಾರಿ ಗುಣಮಟ್ಟದಾಗಿರಬೇಕೆಂದು ಎಂ.ಡಿ. ಅವರಿಗೆ ನಿರ್ದೇಶನ ನೀಡಿದ ಅವರು ಅನುಭವಿ ಶಾಸಕರಾಗಿರುವ ಬಿ.ಆರ್.ಪಾಟೀಲ ಅವರಿಗೆ ಮಂತ್ರಿ ಸ್ಥಾನ ಶೀಘ್ರ ದೊರೆಯಲಿ ಎಂದ ಶುಭ ಹಾರೈಸಿದರು.
ಇದಕ್ಕೂ ಮುನ್ನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ಮತ್ತು ಆಳಂದ ಘಟಕದ ಸಂಕ್ಷಿಪ್ತ ಮಾಹಿತಿ ನೀಡಿದ ಅವರು, 1.22 ಎಕರೆ ಪ್ರದೇಶದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಮುಂದಿನ ದಿನದಲ್ಲಿ ತಾಲೂಕಿನ ಸಾರಿಗೆ ಸಂಪರ್ಕ ಉತ್ತಮಗೊಳ್ಳಲಿದೆ ಎಂದರು.
6 ಜನರಿಗೆ ನೇಮಕಾತಿ ಆದೇಶ ಪತ್ರ ವಿತರಣೆ: ಕೆ.ಕೆ.ಆರ್.ಟಿ.ಸಿ. ಸಂಸ್ಥೆಯ ಬಳ್ಳಾರಿ, ರಾಯಚೂರು, ಬೀದರ ಜಿಲ್ಲೆಯಲ್ಲಿ ನಿಧನ ಹೊಂದಿದ 36 ನೌಕರರ ಅವಲಂಭಿತರಿಗೆ ಅನುಕಂಪದ ಅಧಾರದ ಮೇಲೆ ನೇಮಕಾತಿ ಪತ್ರವನ್ನು ಡಚಿವ ರಾಮಲಿಂಗಾರೆಡ್ಡಿ ವಿತರಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಬಸ್ ನಲ್ಲಿ ಪ್ರಯಟಣ ಮಾಡುವಾಗ ದುರ್ಘಟನೆಯಲ್ಲಿ ಮೃತರಾದ ಇಬ್ಬರು ಪ್ರಯಾಣಿಕರ ಅವಲಂಭಿತರಿಗೆ ತಲಾ 10 ಲಕ್ಷ ರೂ. ಗಳಂತೆ ಅಪಘಾತ ಪರಿಹಾರ ನಿಧಿಯಡಿ ಪರಿಹಾರದ ಚೆಕ್ ಸಚಿವರು, ಶಾಸಕರು ವಿತರಿಸಿದರು.
ಪುರಸಭೆ ಅಧ್ಯಕ್ಷೆ ಫಿರ್ದೊಸ್ ಅನ್ಸಾರಿ, ಉಪಾಧ್ಯಕ್ಷೆ ಕವಿತಾ ಎಸ್. ನಾಯಕ್, ಸದಸ್ಯೆ ಸ್ಮಿತಾ ಚಿಟಗುಪ್ಪಿಕರ್, ಪಂಚ ಗ್ಯಾರಂಟಿ ಅಧ್ಯಕ್ಷ ಶಿವಪುತ್ರ ಪಾಟೀಲ ಮುನ್ನುಳ್ಳಿ, ಉಪಾಧ್ಯಕ್ಷ ಗುರುನಾಥ ಪಾಟೀಲ, ಕೆ.ಕೆ.ಆರ್.ಟಿ.ಸಿ ಸಂಸ್ಥೆಯ ಮುಖ್ಯ ಸಂಚಾರಿ ವ್ಯವಸ್ಥಾಪಕ ಸಂತೋಷ ಪಾಟೀಲ, ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ. ಗಂಗಾಧರ, ತಹಶೀಲ್ದಾರ ಅಣ್ಣಾರಾವ ಪಾಟೀಲ, ಇ.ಓ ಮಾನಪ್ಪ ಕಟ್ಟಿಮನಿ, ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಗುರುಶರಣ ಪಾಟೀಲ, ರಾಜಶೇಖರ ಚಿತಲಿ, ಕಾಂಗ್ರೆಸ್ ಅಧ್ಯಕ್ಷ ಶರಣಗೌಡ ಪಾಟೀಲ, ಸೇರಿದಂತೆ ಅನೇಕ ಮುಖಂಡರು, ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿ ಸುನಿಲ್ ಕುಮಾರ ಚಂದರಗಿ ಸ್ವಾಗತಿಸಿದರು. ವೆಂಕಟೇಶ ಜನಾದ್ರಿ ವಂದಿಸಿದರು.









