ಆಳಂದ: ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ತೀವ್ರ ದೋಷಗಳಿದ್ದು, ಸಮುದಾಯಗಳ ವಾಸ್ತವಿಕ ಸಾಮಾಜಿಕ-ಆರ್ಥಿಕ ಸ್ಥಿತಿ, ಜನಸಂಖ್ಯಾ ಪ್ರಮಾಣ, ಹಕ್ಕುಗಳ ಹಂಚಿಕೆ ಸರಿಯಾಗಿ ಪರಿಗಣಿಸದೇ ಅನ್ಯಾಯ ಮಾಡಲಾಗಿದೆ ಎಂಬ ಆರೋಪದೊಂದಿಗೆ ಆಳಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಬಂಜಾರಾ ಕ್ರಾಂತಿದಳದ ನೇತೃತ್ವದಲ್ಲಿ ಲಂಬಾಣಿ, ಭೋವಿ, ಕೊರಮ, ಕೊಂಚ ಸಮುದಾಯದ ನೂರಾರು ಜನರು ಕೈಯಲ್ಲಿ ಬ್ಯಾನರ್, ಪೈಳುಗಳನ್ನು ಹಿಡಿದು “ನಾಗಮೋಹನ್ ದಾಸ್ ವರದಿ ಪುನರ್‍ಪರಿಶೀಲನೆ! ನಮ್ಮ ಸಮುದಾಯಗಳಿಗೆ ನ್ಯಾಯ ನೀಡಿ!” “ವರದಿ ರದ್ದು! ವೈಜ್ಞಾನಿಕ ಸಮೀಕ್ಷೆ ಆರಂಭಿಸಿ! ನಮಗೆ ಸಮಾನ ಹಕ್ಕು, ಸಮರ್ಪಕ ಮೀಸಲಾತಿ ಬೇಕು ಎಂದು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.

ಮಾಜಿ ಸಂಸದ ಡಾ. ಉಮೇಶ್ ಜಾಧವ್ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ವರದಿಯಲ್ಲಿ ಸಮುದಾಯಗಳಿಗೆ ಮಾಡಿದ ಅನ್ಯಾಯವನ್ನು ತೀಕ್ಷ್ಣವಾಗಿ ಟೀಕಿಸಿದರು. “ವರದಿಯು ಏಕಪಕ್ಷೀಯವಾಗಿ ರೂಪಿತವಾಗಿದೆ. ಲಂಬಾಣಿ, ಭೋವಿ, ಕೊರಮ, ಕೊಂಚ ಉಪಜಾತಿಗಳಿಗೆ ನ್ಯಾಯ ದೊರೆಯದಿದ್ದರೆ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತದೆ” ಎಂದು ಎಚ್ಚರಿಸಿದರು.
ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಚವ್ಹಾಣ ಅವರು ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರವು ಈ ನಾಲ್ಕು ಜಾತಿಗಳಿಗೆ ಶೇ. 4.5 ಮೀಸಲಾತಿ ನೀಡಿದ್ದರೆ, ಈಗಿನ ಕಾಂಗ್ರೆಸ್ ಸರ್ಕಾರವು 63 ಜಾತಿಗಳಿಗೆ ಸೇರಿಸಿ ಕೇವಲ ಶೇ. 5 ಮೀಸಲಾತಿ ನೀಡಿರುವುದು ಅಸಮಂಜಸವಾಗಿದೆ ಎಂದರು. “ಸರ್ಕಾರವು ವೈಜ್ಞಾನಿಕ ಸಮೀಕ್ಷೆ ನಡೆಸಿ ನಿಖರ ದತ್ತಾಂಶ ಆಧಾರದ ಮೇಲೆ ಸಮುದಾಯಗಳಿಗೆ ಕನಿಷ್ಠ ಶೇ. 7 ಮೀಸಲಾತಿ ನೀಡಬೇಕು. ಇಲ್ಲವಾದರೆ ಹೋರಾಟ ರಾಜ್ಯಮಟ್ಟದಲ್ಲಿ ತೀವ್ರಗೊಳ್ಳುತ್ತದೆ” ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ನಾಯಕರು, ಲಂಬಾಣಿ, ಭೋವಿ, ಕೊರಮ, ಕೊಂಚ ಸಮುದಾಯಗಳನ್ನು ‘ಸ್ಪೃಶ್ಯ ಜಾತಿ’ ಎಂದು ಗುರುತಿಸಿರುವುದು ಅಸಂವಿಧಾನಿಕ ಎಂದು ಕಟುವಾಗಿ ಖಂಡಿಸಿದರು. ಕೂಡಲೇ ಆ ಶಿಫಾರಸ್ಸುಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದರು.
ನ್ಯಾ. ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತಂತೆ ಸಲ್ಲಿಸಿದ ವರದಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ಶೇ.1ರ ಮೀಸಲಾತಿ ಶಿಫಾರಸು ಇದ್ದರೂ, ಇತರ ಉಪಜಾತಿಗಳಿಗೆ ನ್ಯಾಯ ಒದಗಿಸದಿರುವುದು ಸಮುದಾಯಗಳಲ್ಲಿ ಆಕ್ರೋಶ ಉಂಟುಮಾಡಿದೆ.

ಪ್ರತಿಭಟನೆಯಲ್ಲಿ ಲಾಡಚಿಂಚೋಳಿಯ ಶ್ರೀ ಸುನಿಲ ಮಹಾರಾಜ್, ಮುಖಂಡ ಸುಭಾಷ ಫೌಜಿ, ಗಂಗಾರಾಮ ಪವಾರ, ಶಿವಾಜಿ ರಾಠೋಡ, ಮಾಣಿಕ ಜಾಧವ, ಕೆ.ಟಿ.ರಾಠೋಡ, ಕಲಬುರಗಿ ಶ್ಯಾಮರಾವ್ ಪವಾರ, ಚಂದು ಜಾಧವ, ವೆಂಕಟೇಶ ರಾಠೋಡ, ಕಿಶನ ರಾಠೋಡ, ಬಂಜಾರಾ ತಾಲೂಕು ಅಧ್ಯಕ್ಷ ದಿನೇಶ ಪವಾರ, ಸುಭಾಷ ಚವ್ಹಾಣ, ಭೋವಿ ಸಮಾಜದ ಅಧ್ಯಕ್ಷ ಭೀಮಣ್ಣ ಬನಪಟ್ಟಿ, ಮುಖಂಡ ಕನಕಪ್ಪ ದಂಡಗುಲೆ, ಶ್ಯಾಮರಾವ್ ದಂಡಗುಲೆ, ಅಂಬಣ್ಣ ಕುಶಾಳಕರ್, ಯಲ್ಲಪ್ಪ ಪಾತ್ರೋಟ್, ಕೊರಮ ಸಮಾಜದ ಕಲ್ಯಾಣಿ ಜಾಧವ, ನ್ಯಾಯವಾದಿ ಸಂಜಯ ನಾಯಕ, ವೆಂಕಟೇಶ ಗುತ್ತೇದಾರ ಸೇರಿದಂತೆ ಅನೇಕರು ಭಾಗವಹಿಸಿದ್ದು. ಬಳಿಕ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಿಂದ ಹಾಗೂ ಸಮುದಾಯಗಳ ಜಿಲ್ಲಾ ರಾಜ್ಯ ಮುಖಂಡರು ಭಾಗವಹಿಸಿದ್ದರು.









