ಆಳಂದ: ಪಟ್ಟಣದ ಮಟಕಿ ರಸ್ತೆಯಲ್ಲಿನ ಸಾರ್ವಜನಿಕ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಲಬುರಗಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ 2025-26ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ಗಡಿನಾಡಿನ ಕ್ರೀಡಾಪಟುಗಳಿಗೆ ಭರವಸೆ ಆಸೆಮೂಡಿಸಿತು. ಕ್ರೀಡಾಕೂಟವು ಇಂದು ವಿಜೃಂಭಣೆಯಿಂದ ಆರಂಭಗೊಂಡಿತು.

ಆರಂಭದಲ್ಲಿ ಪುರಸಭೆ ಉಪಾಧ್ಯಕ್ಷೆ ಕವಿತಾ ಸಂಜಯ್ ನಾಯಕ್ ಕ್ರೀಡಾ ಸಮಾರಂಭವನ್ನು ಉದ್ಘಾಟಿಸಿದರು. ಈ ಮೊದಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಕ್ರೀಡಾಧ್ವಜಾರೋಹಣ ಕೈಗೊಂಡು ಇಂದು ಪ್ರತಿಯೊಂದು ಮಗುವಿನಲ್ಲಿ ಕ್ರೀಡಾ ಮನೋಭಾವ ಬೆಳೆಸಬೇಕು. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ತಂದುಕೊಡುತ್ತದೆ. ಇಂಥ ಕ್ರೀಡಾ ಸ್ಪರ್ಧೆಗಳಲ್ಲಿ ಪಾಳ್ಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಸೋಲು ಗೆಲವು ಮುಖ್ಯವಲ್ಲ ಸಮಾನಗಿ ಸ್ವೀಕರಿಸಬೇಕು. ಕ್ರೀಡೆಯಲ್ಲಿ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಸತೀಷ ಷಣ್ಮೂಖ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವ ಗುಣಕಿ ಸೇರಿ ಇತರರು ಮಾತನಾಡಿದರು.

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ, ದೈಹಿಕ ಶಿಕ್ಷಣಾಧಿಕಾರಿ ಅರವಿಂದ್ ಭಾಸಗಿ, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿನಾಥ್ ಖಜೂರ್ಗಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದತ್ತ ಬಡಿಗೇರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ್, ಮಾಜಿ ಅಧ್ಯಕ್ಷ ಚಂದ್ರಶೇಖರ್ ಪೂಜಾರಿ, ಶಿವಬಸಪ್ಪ ಟಕ್ಕಳಕಿ, ಚಂದ್ರಕಾಂತ್ ಕಾಂಬಳೆ, ಮನೋಹರ ಟೋಕೆ ಸೇರಿದಂತೆ ದೈಹಿಕ ಶಿಕ್ಷಕರು, ಶಿಕ್ಷಕಿಯರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಶರಣಬಸಪ್ಪ ವಡಗಾಂವ ನಿರೂಪಿಸಿದರು, ಸತೀಶ್ ಕೋಗನೂರ್ ಸ್ವಾಗತಿಸಿದರು. ಉದ್ಘಾಟನೆಯ ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳು ಆರಂಭಗೊಂಡವು. ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ಕ್ರೀಡಾಕೂಟ ಫೋಟೋಕಾಲನಂತೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿತ ಶಾಸಕರು, ತಹಸೀಲ್ದಾರ ಸೇರಿದಂತೆ ಅಧಿಕಾರಿಗಳು ಗೈರಾಗಿದ್ದಾರು. ಕೊನೆಗೂ ಶಾಲಾ ದೈಹಿಕಶಿಕ್ಷಕರ ಛಲದೊಂದಿಗೆ ಕ್ರೀಡಾಕೂಟ ಯಶಸ್ವಿಯಾಗಿ ಸಾಗಿತು.
ದೈಹಿಕ ಶಿಕ್ಷಕರ ನೇಮಕಾತಿಗೆ ಒತ್ತಾಯ: ಪ್ರಾಥಮಿಕ ಶಾಲಾ ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಳಂದ ಘಟಕವು ಸರ್ಕಾರಕ್ಕೆ ವೇದಿಕೆಯಲ್ಲಿ ಮನವಿ ಸಲ್ಲಿಸಿ, ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಕ್ರೀಡಾಕೂಟ ಸಮಾರಂಭದಲ್ಲಿ ಒತ್ತಾಯಿಸಿದೆ. ಸಂಘದ ಅಧ್ಯಕ್ಷ ಮಾದೇವ ಗುಣ್ಕಿ ಅವರು “ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಕಡ್ಡಾಯವಾದರೂ, ಹುದ್ದೆಗಳು ಖಾಲಿ ಉಳಿದಿವೆ. ರಾಜ್ಯದ 43 ಸಾವಿರ ಶಾಲೆಗಳ ಮಕ್ಕಳು ಆಟೋಟದಿಂದ ವಂಚಿತರಾಗಿದ್ದಾರೆ. 2007ರಲ್ಲೇ ಸಮಿತಿ ಶಿಫಾರಸು ಮಾಡಿದರೂ ನೇಮಕಾತಿ ನಿಧಾನಗತಿಯಲ್ಲಿದೆ. ತರಬೇತಿ ಪಡೆದ 2 ಲಕ್ಷ ಅಭ್ಯರ್ಥಿಗಳ ಭವಿಷ್ಯ ಸಂಕಷ್ಟದಲ್ಲಿದೆ. ಆಳಂದದಲ್ಲಿ 40-50 ಶಾಲೆಗಳಲ್ಲಿ ಕೇವಲ 10 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವಂತಾಗಲು ಶಾಸಕರು ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.










