ಆಳಂದ: ಸಿಎಂ ಸಿದ್ದರಾಮಯ್ಯ ಅವರಿಗೆ ‘ಸಿದ್ರಾಮುಲ್ಲಾ’ಎಂದು ಅವಹೇಳನಕಾರಿಯಾಗಿ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿರುವ ಆರೋಪದ ಮೇರೆಗೆ ಪಿಡಿಒವೊಬ್ಬರ ವಿರುದ್ಧ ಆಳಂದ ತಾಲ್ಲೂಕಿನ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಬೆಳಗ್ಗೆ ಪ್ರಕರಣ ದಾಖಲಾಗಿದೆ.
ಆಳಂದ ತಾಲ್ಲೂಕಿನ ಸುಂಟನೂರ ಗ್ರಾಮ ಪಂಚಾಯತ್ ಪಿಡಿಒ ಪ್ರವೀಣ ಕುಮಾರ್ ಉಡಗಿ ವಿರುದ್ದ ಅದೇ ಗ್ರಾಮದ ಮಲ್ಲಿಕಾರ್ಜುನ ದಣ್ಣೂರ ಎಂಬಾತರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಆ.21ರಂದು ಪಿಡಿಒ ಪ್ರವೀಣಕುಮಾರ್ ತಮ್ಮ ಮೊಬೈಲ್ ನಲ್ಲಿ ‘ಸಿದ್ರಾಮುಲ್ಲಾ’ ಎಂದು ಬರೆಯುವುದರ ಜೊತೆಗೆ ಸಿದ್ದರಾಮಯ್ಯ ಅವರ ತಲೆಗೆ ಮುಸ್ಲಿಮರು ಧರಿಸುವ ಟೊಪ್ಪಿ ಹಾಕಿರುವಂತೆ ಎಡಿಟ್ ಮಾಡಲಾದ ಚಿತ್ರವನ್ನು ಸ್ಟೇಟಸ್ ಹಾಕಿದ್ದಾರೆ. ಚಿತ್ರದಲ್ಲಿ ‘ಸಿದ್ರಾಮುಲ್ಲಾನ ಬಜೆಟ್ ನಲ್ಲಿ ಕೃಷಿಕರಿಗೆ ಬೆಲೆನೇ ಇಲ್ವಾ? ರೈತರ ಕಷ್ಟ ಹಾಗೂ ನಷ್ಟಗಳಿಗಿಂತ ಮುಸ್ಲಿಂ ಕಾಂಟ್ರಾಕ್ಟರ್ ಮಹತ್ವದ್ದಾಗಿದೆ’ ಎಂದು ಸ್ಟೇಟಸ್ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪಿಡಿಒ ಪ್ರವೀಣಕುಮಾರ್ ವಿರುದ್ಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 82/2025 ಕಲಂ 299, 353, 198 ಬಿಎನ್ ಎಸ್ ಕಾಯಿದೆ 2023 ರ ಪ್ರಕಾರ ಪ್ರಕರಣ ದಾಖಲಾಗಿದೆ.









