ಆಳಂದ: ಪಟ್ಟಣದ ಬಾಳನಕೇರಿಯ ಲಕ್ಷ್ಮೀ ಜಮಖಂಡಿ ತಮಗೆ ಹಾವು ಕಡಿದಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜೀವ ಉಳಿಸಿದ ಡಾ. ಉಮಾಕಾಂತ ರಾಜಗಿರಿ ಅವರ ತಂಡಕ್ಕೆ ಭೇಟಿ ನೀಡಿ ಶುಕ್ರವಾರ ಕೃತಜ್ಞತೆ ಸಲ್ಲಿಸಿ ಮಾನವೀಯತೆ ಮೆರೆದರು. ನಾಗರ ಪಂಚಮಿಯ ಹಬ್ಬದಂದು ಪಟ್ಟಣದ ಬಾಳನಕೇರಿ ನಿವಾಸಿ ಲಕ್ಷ್ಮೀ ಚಂದ್ರಕಾಂತ ಜಮಖಂಡಿ ಅವರಿಗೆ ಹಾವು ಕಡಿದು ಮೈಯಲ್ಲಿ ವಿಷ ಹರಡಿದ ಪರಿಣಾಮ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದರು. ಕುಟುಂಬಸ್ಥರು ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಹೃದಯವೇ ನಿಂತು ಗಂಭೀರ ಸ್ಥಿತಿಗೆ ತಲುಪಿದ ಲಕ್ಷ್ಮಿಗೆ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಿದ ಘಟನೆ ನಡೆದಿದೆ.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಉಮಾಕಾಂತ ರಾಜಗಿರಿ ಅವರ ನೇತೃತ್ವದ ವೈದ್ಯರ ತಂಡ ತಕ್ಷಣ ಕಾರ್ಯಪ್ರವರ್ತವಾಗಿ ಸೂಕ್ತ ಚಿಕಿತ್ಸೆ ನೀಡಿದ ಕಾರಣ ಲಕ್ಷ್ಮಿ ಚೇತರಿಸಿಕೊಂಡರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ 12 ದಿನಗಳ ಕಾಲ ಚಿಕಿತ್ಸೆ ಪಡೆದು ಅವರು ಬದುಕುಳಿದ ಬಳಿಕ ಮನೆಯಲ್ಲಿ ಕೆಲವು ದಿನ ವಿಶ್ರಾಂತಿ ಪಡೆದರು. ಇದೀಗ ಶುಕ್ರವಾರ ಅವರು ತಮ್ಮ ಕುಟುಂಬಸ್ಥರೊಂದಿಗೆ ಸರ್ಕಾರಿ ಆಸ್ಪತ್ರೆಗೆ ಬಂದು ವೈದ್ಯರ ಪ್ರತಿಕ್ರಿಯೆಗೆ ಹರ್ಷವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. “ಈ ವೈದ್ಯರು ನನಗೆ ಹೊಸ ಜೀವ ನೀಡಿದ್ದಾರೆ. ನಾನು ಎಂದಿಗೂ ಅವರ ಋಣಿಯಾಗಿರುತ್ತೇನೆ” ಎಂದು ಲಕ್ಷ್ಮಿ ಹೇಳಿದರು. ಕುಟುಂಬಸ್ಥರು ಕೂಡ, “ವೈದ್ಯರ ತಕ್ಷಣದ ನಿರ್ಧಾರ ಮತ್ತು ತಂಡದ ಶ್ರಮದಿಂದಲೇ ಲಕ್ಷ್ಮಿ ಬದುಕುಳಿದಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ಚಿಕಿತ್ಸೆಗೆ ಶ್ರಮಿಸಿದವರು ಡಾ. ಉಮಾಕಾಂತ ರಾಜಗಿರಿ (ಮುಖ್ಯ ವೈದ್ಯಾಧಿಕಾರಿ), ಡಾ. ಯುನೂಸ್ ಸಲಿಂ (ಅನಸ್ಥೇಷಿಯಾ), ಡಾ. ಆಫಿಯಾ (ಜನರಲ್ ಮೆಡಿಸಿನ್), ಡಾ. ಅಮರ್ (ಎಲುಬು ತಜ್ಞ), ಡಾ. ಗಿರೀಶ್ ಸೇರಿದಂತೆ ಸಿಬ್ಬಂದಿಗಳು.
ಡಾ. ಉಮಾಕಾಂತ ರಾಜಗಿರಿ ಹಾವು ಕಡಿತದ ಸಂದರ್ಭದಲ್ಲಿ ಜನರಿಗೆ ನೀಡಿದ ಸಲಹೆಗಳಲ್ಲಿ ಹೇಳಿದ್ದು, ಹಾವು ಕಡಿತವಾದ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ಆಂಟಿ-ವೆನಮ್ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಕಡಿದ ಭಾಗವನ್ನು ಚಲಿಸದಂತೆ ಇರಿಸಿ, ಸಾಬೂನು ಮತ್ತು ನೀರಿನಿಂದ ಶುದ್ಧಗೊಳಿಸಿ, ರೋಗಿಯನ್ನು ಶಾಂತವಾಗಿರಿಸಿ. ಆತಂಕವು ವಿಷದ ಹರಡುವಿಕೆಯನ್ನು ವೇಗಗೊಳಿಸಬಹುದು.
ಹಾವು ಕಡಿತಕ್ಕೆ ಸಾಂಪ್ರದಾಯಿಕ ಚಿಕಿತ್ಸಕರ ಬಳಿ ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದು ಸಮಯ ವ್ಯರ್ಥಮಾಡುವುದಷ್ಟೇ ಅಲ್ಲ, ಪರಿಸ್ಥಿತಿಯನ್ನು ಹದಗೆಡಿಸುತ್ತದೆ. ಮಂತ್ರ-ತಂತ್ರ, ಗಂಡಾಂತರ ಚಿಕಿತ್ಸೆಗಳು ಫಲರಹಿತವಾಗಿದ್ದು, ಇದರಲ್ಲಿ ನಂಬಿಕೆ ಇಡುವುದು ಜೀವಕ್ಕೆ ಅಪಾಯಕಾರಿ. ಹಾವು ಕಡಿತಕ್ಕೆ ಆಂಟಿ-ವೆನಮ್ ಮಾತ್ರ ಪರಿಣಾಮಕಾರಿ ಚಿಕಿತ್ಸೆ ಮತ್ತು ಇದು ಕೇವಲ ಆಸ್ಪತ್ರೆಯಲ್ಲೇ ದೊರೆಯುತ್ತದೆ. ಜನರು ತಪ್ಪು ನಂಬಿಕೆ ಬಿಟ್ಟು ತಕ್ಷಣವೇ ವೈದ್ಯಕೀಯ ಸಹಾಯ ಪಡೆಯಬೇಕು.
ಡಾ. ಉಮಾಕಾಂತ ರಾಜಗಿರಿ ಹಾವು ಕಡಿತದ ಸಂದರ್ಭದಲ್ಲಿ ತಪ್ಪು ಕ್ರಮಗಳ ಬಗ್ಗೆ ಕೂಡ ಎಚ್ಚರಿಕೆ ನೀಡಿದ್ದಾರೆ. ಕಡಿದ ಜಾಗವನ್ನು ಕತ್ತರಿಸಬೇಡಿ ಅಥವಾ ಚೂರಿ ಬಳಸಬೇಡಿ, ಬಾಯಿಯಿಂದ ವಿಷ ಹೀರಲು ಪ್ರಯತ್ನಿಸಬೇಡಿ, ವೈದ್ಯರ ಸಲಹೆ ಇಲ್ಲದೆ ಔಷಧಿ ಕೊಡಬೇಡಿ, ಬಿಗಿಯಾದ ಬ್ಯಾಂಡೇಜ್ ಹಾಕಬೇಡಿ. ಪಾದಗಳು ಅಥವಾ ಕೈಗಳಿಗೆ ದಾರಿಗಳು, ಹಾರಿ, ಬಟ್ಟೆ, ತಂತಿ ಮುಂತಾದವುಗಳನ್ನು ಕಟ್ಟಬೇಡಿ; ಈ ರೀತಿಯ ವಸ್ತುಗಳನ್ನು ತೆಗೆದಾಗ ರಕ್ತವು ಜೋರಾಗಿ ಹರಿದು ಗಂಭೀರ ಪರಿಸ್ಥಿತಿ ಉಂಟಾಗಬಹುದು.
ಪ್ರತಿಕ್ಷಣವೂ ಅಮೂಲ್ಯ, ಹಾವು ಕಡಿತವಾದರೆ ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಮಾತ್ರವೇ ಜೀವ ಉಳಿಸುವ ಮಾರ್ಗ ಎಂದು ಡಾ. ಉಮಾಕಾಂತ ರಾಜಗಿರಿ ಸ್ಪಷ್ಟಪಡಿಸಿದರು.









