ಆಳಂದ: ಉದ್ಯೋಗವು ಶಿಕ್ಷಣದ ಉಪಉತ್ಪನ್ನವಾಗಿದೆ. ಶಿಕ್ಷಣದ ನಿಜವಾದ ಗುರಿ ಮಾನವರನ್ನು ಸೃಷ್ಟಿಸುವುದಾಗಿದೆ” ಎಂದು ನವದೆಹಲಿಯ ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಶಂಕರಾನಂದಜಿ ಅಭಿಪ್ರಾಯಪಟ್ಟರು.
ತಾಲೂಕಿನ ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಭಾರತೀಯ ಶಿಕ್ಷಣ ಮಂಡಲ ಮತ್ತು ಶೆಟ್ಟಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಸ್‍ಐಟಿ), ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ‘ಭಾರತೀಯ ಮಾದರಿಯ ಪಠ್ಯಕ್ರಮ ವಿನ್ಯಾಸ’ ಕುರಿತು ಎಸ್‍ಐಟಿ ಕ್ಯಾಂಪಸ್‍ನಲ್ಲಿ ನಡೆದ ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
“1835ರಲ್ಲಿ ಬ್ರಿಟಿಷರು ತಮ್ಮ ಕೈಗೆ ಅನುಕೂಲವಾಗುವಂತೆ ಗುಮಾಸ್ತರನ್ನು ತಯಾರಿಸಲು ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದರು. ಅದನ್ನು ನಾವು 200 ವರ್ಷಗಳಿಂದ ಅನುಸರಿಸುತ್ತಿದ್ದೇವೆ. ಇದರ ಪರಿಣಾಮವಾಗಿ ಪಾಶ್ಚಾತ್ಯ ಶಿಕ್ಷಣದ ಮಾನಸಿಕ ಗುಲಾಮರಾಗಿರುವುದು ದುಃಖಕರ. ಈಗ ನಾವು ಅದರಿಂದ ಹೊರಬಂದು ನಿಜವಾದ ಭಾರತೀಯ ಮಾದರಿಯ ಪಠ್ಯಕ್ರಮವನ್ನು ರೂಪಿಸಬೇಕು. ಇದು ದೈಹಿಕ, ಮಾನಸಿಕ ಆರೋಗ್ಯವಂತ ಮನುಷ್ಯ, ಕುಟುಂಬ, ಸಮಾಜವನ್ನು ಸೃಷ್ಟಿಸಿ ಆರೋಗ್ಯಕರ ರಾಷ್ಟ್ರ ನಿರ್ಮಾಣಕ್ಕೆ ಕಾರಣವಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಪಠ್ಯಕ್ರಮದ ಉದ್ದೇಶವು ಜನರನ್ನು ನ್ಯಾಯಯುತ, ದಯಾಳು, ಸತ್ಯವಂತರನ್ನಾಗಿ ಮಾಡಬೇಕು. ಶಿಕ್ಷಕರು ಬದ್ಧತೆ, ಸಮರ್ಪಣೆ ಮತ್ತು ಭಕ್ತಿಯಿಂದ ಕೆಲಸ ಮಾಡಬೇಕು. ನಾವು ಶಿಕ್ಷಕ ಕೇಂದ್ರಿತ ಶಿಕ್ಷಣದಿಂದ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕೆ ಬದಲಾಗಬೇಕು. ಕಲಿಕೆ ಕೇಂದ್ರಿತ ಮತ್ತು ಫಲಿತಾಂಶ ಆಧಾರಿತ ಶಿಕ್ಷಣದತ್ತ ಹೆಜ್ಜೆ ಇಡಬೇಕು. ಎನ್‍ಇಪಿ 2020 ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ” ಎಂದರು.
ಸಿಯುಕೆಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, “ಭಾರತೀಯ ಶಿಕ್ಷಣ ವ್ಯವಸ್ಥೆಯು ಉತ್ತಮ ಕುಟುಂಬ ಹಾಗೂ ಸಾಮಾಜಿಕ ಸಂಬಂಧಗಳನ್ನು ಕಟ್ಟಿಕೊಡುತ್ತದೆ. ಇಂದು ಜಗತ್ತಿನಾದ್ಯಂತ ಜನರು ಭಾರತೀಯ ಸಂಸ್ಕøತಿ, ತತ್ವಶಾಸ್ತ್ರ, ವಿಜ್ಞಾನ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಲು ಭಾರತಕ್ಕೆ ಬರುತ್ತಿದ್ದಾರೆ. ವಿಕಸಿತ ಭಾರತದ ಗುರಿ ಜಗತ್ತಿಗೆ ಮಾದರಿ ಶಿಕ್ಷಣ ವ್ಯವಸ್ಥೆ ಒದಗಿಸುವುದಾಗಿದೆ. ಜ್ಞಾನವು ಪ್ರಮಾಣಪತ್ರಕ್ಕಿಂತ ಮುಖ್ಯ. ಜೀವನಕ್ಕೆ ಅರ್ಥ ನೀಡುವುದು ಭಾರತೀಯ ಶಿಕ್ಷಣ ವ್ಯವಸ್ಥೆ ಮಾತ್ರ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಶಿಕ್ಷಣ ಮಂಡಲದ ಉತ್ತರ ಪ್ರಾಂತದ ಅಧ್ಯಕ್ಷ ಬಸವರಾಜ ಅನಾಮಿ, ಶೆಟ್ಟಿ ಗ್ರೂಪ್ ಆಫ್ ಇನ್‍ಸ್ಟಿಟ್ಯೂಟ್ ನಿರ್ದೇಶಕ ಅನಿರುದ್ಧ ಶೆಟ್ಟಿ ಮಾತಾಡಿದರು. ಪ್ರೊ. ರವೀಂದ್ರ ಹೆಗಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ನಿತೀನ್ ಬಿ ನಿರೂಪಣೆ ಮಾಡಿದರು ಹಾಗೂ ಶ್ರೀಮತಿ ಪಲ್ಲವಿ ಪಾಟೀಲ ವಂದಿಸಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಲಿಂಗೈಕ್ಯರಾದ ಪೂಜ್ಯ ಡಾ. ಶರಬಸವಪ್ಪ ಅಪ್ಪಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಉದಯಶಂಕರ ಶೆಟ್ಟಿ, ಪ್ರೊ. ಬಸವರಾಜ ಡೋಣೂರ, ಪ್ರೊ. ಜಿ.ಆರ್. ಅಂಗಡಿ, ಪ್ರೊ. ಗಣೇಶ ಪವಾರ, ಬಸವರಾಜ ಕುಬಕಡ್ಡಿ, ಶರಣು ಉದನೂರ, ಸಿದ್ದು ಮದರಕಂಡಿ ಸೇರಿದಂತೆ ಹಲವು ಗಣ್ಯರು ಹಾಗೂ ಆಹ್ವಾನಿತರು ಭಾಗವಹಿಸಿದ್ದರು.









