ಆಳಂದ: “ಸುಂಕ ಏರಿಕೆ ಭಾರತದ ರಫ್ತು, ಆಭರಣ ಮಾರುಕಟ್ಟೆ, ಶೇರು ಮಾರುಕಟ್ಟೆ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅಮೇರಿಕಾ ಜೊತೆಗಿನ ವ್ಯಾಪಾರ ಯುದ್ಧದಿಂದ ಭಾರತವು ಸುಮಾರು 64 ಬಿಲಿಯನ್ ಡಾಲರ್‌ಗಳಷ್ಟು ನಷ್ಟ ಅನುಭವಿಸುವ ಸಾಧ್ಯತೆ ಇದೆ” ಎಂದು ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್‌ನ ಪ್ರೊ. ಕೈಲಾಸ್ ಥಾವರೆ ಎಚ್ಚರಿಸಿದರು.
ತಾಲೂಕಿನ ಕಡಗಂಚಿ ಬಳಿಯ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದಲ್ಲಿ “ವ್ಯಾಪಾರ ಯುದ್ಧ: ಏಕಾಂಗಿಯಾಗಿಸುವಿಕೆಯೋ ಅಥವಾ ಬಹುಪಕ್ಷೀಯತೆಯೋ?” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
“ಭಾರತದ ರಫ್ತುಗಳ ಮೇಲಿನ ಸುಂಕ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿ ರಷ್ಯೆಯಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವುದು ಪರಿಣಮಿಸಿದೆ” ಎಂದು ಹೇಳಿದರು.
ಚೀನಾದ ಪರಿಸ್ಥಿತಿಯನ್ನು ಹೋಲಿಕೆ ಮಾಡುತ್ತ ಅವರು, “ಚೀನಾದಲ್ಲಿ ಹೆಚ್ಚಿನ ಹೂಡಿಕೆದಾರರು ಅಮೆರಿಕನ್ನರಾಗಿರುವುದರಿಂದ ಚೀನಾದ ವಸ್ತುಗಳ ಮೇಲೆ ಕಡಿಮೆ ಸುಂಕ ವಿಧಿಸಲಾಗುತ್ತಿದೆ. ವಿದೇಶಿ ಹೂಡಿಕೆ ಸಂಸ್ಥೆಗಳು ಚೀನಾದ ರಫ್ತಿನ 45% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ, ಇದರಲ್ಲಿ ಅನೇಕವು ಅಮೆರಿಕಾ ಸಂಪರ್ಕ ಹೊಂದಿವೆ. ಅಮೇರಿಕಾ ಕಂಪನಿಗಳು ಚೀನಾದಲ್ಲಿ ಬೃಹತ್ ಪೂರೈಕೆ ಸರಪಳಿಗಳನ್ನು ಹೊಂದಿರುವುದರಿಂದ, ಚೀನಾದ ವಸ್ತುಗಳ ಮೇಲೆ ಸುಂಕ ಏರಿಕೆ ನಡೆದರೆ ಅದು ಅಮೆರಿಕಾ ಕಂಪನಿಗಳ ಖರ್ಚನ್ನೇ ಹೆಚ್ಚಿಸುತ್ತದೆ. ಇದರಿಂದಲೇ ಅಮೇರಿಕಾ, ಚೀನಾಗೆ ಭಾರತಕ್ಕಿಂತ ಕಡಿಮೆ ಸುಂಕ ವಿಧಿಸುತ್ತಿದೆ” ಎಂದು ವಿವರಿಸಿದರು.
ಅವರು ಇದನ್ನು “ಬಹುಪಕ್ಷೀಯ ಜಗತ್ತಿನಲ್ಲಿ ಕೆಲ ದೇಶಗಳನ್ನು ಆರ್ಥಿಕವಾಗಿ ಏಕಾಂಗಿಯಾಗಿಸುವ ತಂತ್ರ” ಎಂದು ವ್ಯಾಖ್ಯಾನಿಸಿದರು.
ಈ ಸಂದರ್ಭದಲ್ಲಿ ಸಿಯುಕೆಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಸ್ಕೇರಿಯಾ, ಡಾ. ಎಸ್. ಲಿಂಗಮೂರ್ತಿ, ಡಾ. ಬಸವರಾಜ್ ಎಂ.ಎಸ್., ಡಾ. ಮಲ್ಲೇಶ್, ಸಂಶೋಧನಾ ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









