ಆಳಂದ: “ರೈತರು ಈ ದೇಶದ ಬೆನ್ನೆಲುಬು. ಆದರೆ, ಅತಿವೃಷ್ಟಿ, ಅನಾವೃಷ್ಟಿ, ಬೆಳೆಗೆ ಸರಿಯಾದ ಬೆಲೆ ದೊರಕದಿರುವುದು, ಉತ್ಪಾದನಾ ವೆಚ್ಚದ ಏರಿಕೆ ಮತ್ತು ಸರ್ಕಾರಿ ಸೌಲಭ್ಯಗಳ ಕೊರತೆಯಂತಹ ಸಮಸ್ಯೆಗಳು ರೈತರನ್ನು ದಿನದಿಂದ ದಿನಕ್ಕೆ ಕಂಗೆಡಿಸುತ್ತಿವೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರೈತರು ಸಂಘಟಿತವಾಗಿ, ಒಗ್ಗಟ್ಟಿನಿಂದ ಹೋರಾಟ ಮಾಡಲೇಬೇಕು” ಎಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಪಾಟೀಲ ಕರೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಭಾನುವಾರ ನವ ಕರ್ನಾಟಕ ರೈತ ಸಂಘದ ತಾಲೂಕು ಘಟಕ ಆಯೋಜಿಸಿದ್ದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. “ದೇಶದಲ್ಲಿ ಶೇಕಡಾ 80ರಷ್ಟು ಜನರು ವಿಷಪುರಿತ ಆಹಾರ ಸೇವನೆಯಿಂದಾಗಿ ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ. ಜನರಿಗೆ ಆರೋಗ್ಯಕರ ಆಹಾರ ಪೂರೈಸಲು ಸಾವಯವ ಕೃಷಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಆಳಂದ ತಾಲೂಕು ಸಾವಯವ ಕೃಷಿಗೆ ಮಾದರಿಯಾಗುವ ಸಂಕಲ್ಪ ಮಾಡಬೇಕು” ಎಂದರು.
ಅವರು ಮುಂದುವರಿದು, “ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಪರಿಸರ ಸಂರಕ್ಷಣೆಗೆ ಒತ್ತು ನೀಡುವುದರ ಜೊತೆಗೆ ರೈತರು ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಖಾತರಿಯಾಗುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಂಘದಿಂದ ನಡೆಯುತ್ತಿರುವ ಪ್ರಯತ್ನಗಳಿಗೆ ರೈತರು ಬೆನ್ನಲುಬಾಗಿ ನಿಲ್ಲಬೇಕು” ಎಂದು ಸಲಹೆ ನೀಡಿದರು.
ನಿವೃತ್ತ ಮುಖ್ಯ ಶಿಕ್ಷಕ ಎಸ್.ಬಿ. ಪಾಟೀಲ ಮಾತನಾಡಿ, “ದೇಶಕ್ಕೆ ಅನ್ನ ನೀಡುವ ರೈತನ ದುಸ್ಥಿತಿಗೆ ಆಳುವ ಸರ್ಕಾರ ಮತ್ತು ಜನಪ್ರತಿನಿಧಿಗಳೇ ಕಾರಣ. ಶಾಶ್ವತ ಪರಿಹಾರ ನೀಡಿ ರೈತರ ಬದುಕು ಹಸನಾಗಿಸುವ ಕೆಲಸ ಮಾಡಬೇಕು. ಒಗ್ಗಟ್ಟಿನಿಂದಲೇ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಬಹುದು” ಎಂದರು.
ಹೊಸ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಬಸುಲಿಂಗಪ್ಪ ಮುದ್ದಾಣಿ ಹೇಳಿದರು, “ನಮ್ಮ ರೈತ ಸಂಘವು ರೈತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತದೆ. ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ ನ್ಯಾಯ, ಸರಿಯಾದ ಬೆಲೆ ಮತ್ತು ಸೌಲಭ್ಯಗಳು ದೊರೆಯುವಂತೆ ಹೋರಾಟ ಮುಂದುವರಿಸುತ್ತೇವೆ. ಹಿರಿಯರ ಮಾರ್ಗದರ್ಶನ ಸದಾ ಅವಶ್ಯ” ಎಂದರು.
ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿ ಅಮರ ಝಳಕಿ, ಪ್ರಗತಿಪರ ರೈತ ಸೂರ್ಯಕಾಂತ ರಾಮಜಿ, ಸಂಗಣ್ಣ ಮುದ್ದಡಗಿ, ಮಾಡಿಯಾಳ, ಶ್ರೀಶೈಲ ಚಿಟಗೋಟೆ, ಸಂಗಣ ದುದ್ದಗಿ, ಪ್ರಾಚಾರ್ಯ ಮಲ್ಲಿಕಾರ್ಜುನ ಪೂಜಾರಿ, ವಿಠ್ಠಲ ಮುದ್ದಾಣೆ, ಚನ್ನವೀರ ಜಮಾದಾರ, ನಾಗೇಂದ್ರಪ್ಪ ಪಾಟೀಲ, ಭೀಮಶಾ ಮಾಲಿಪಾಟೀಲ, ಶಿವರಾಜ ನೆಲ್ಲೂರ, ಮಲ್ಲಿಕಾರ್ಜುನ ಬುಜುರ್ಕೆ, ಮಲ್ಲಿನಾಥ ದಣ್ಣೂರ, ಶಿವುಕುಮಾರ ಸೇರಿ, ಶಿವಶೃಣಪ್ಪ ಯಳಸಂಗಿ, ರಘು ಹತ್ತರಕಿ, ಬಾಲಾಜಿ ಹಾಗೂ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ಶಿವಲಿಂಗ ಪಾಟೀಲ ನಿರೂಪಣೆ ನಡೆಸಿದರು. ನಗರಾಧ್ಯಕ್ಷರಾಗಿ ಸೋಮು ಹತ್ತರಕಿ ಹಾಗೂ ಯುವ ಘಟಕದ ಅಧ್ಯಕ್ಷರಾಗಿ ನರೇಂದ್ರ ಕೊರಳ್ಳಿ ಅವರ ಆಯ್ಕೆ ಘೋಷಿಸಲಾಯಿತು.









