ಆಳಂದ: ತಾಲೂಕಿನ ಭಾಲಖೇಡ ಹಾಗೂ ಮಮದಾಪೂರ ಗ್ರಾಮಗಳಲ್ಲಿ ನಾಗರ ಪಂಚಮಿ ಪ್ರಯುಕ್ತ ಯುವಕರು, ಮಕ್ಕಳು ಸೇರಿ ದೇವರು-ದೇವತೆಗಳ ವೇಷಧಾರಣೆ ತೊಟ್ಟು ಕೈಗೊಂಡ ಕೋಲಾಟ ಹಬ್ಬದ ಮೆರಗು ನೀಡಿತು.

ಭಾಲಖೇಡ ಗ್ರಾಮದಲ್ಲಿ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕೋಲಾಟ ತಂಡದಿಂದ ಕೈಗೊಂಡ ಕೋಲಾಟ, ವಿವಿಧ ವೇಷಭೂಷಣಗಳು ಮತ್ತು ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಜಾನಪದ ಕಲಾವಿದರಿಗೆ ಗೌರವ ಸತ್ಕಾರ, ಕಲಾ ಪ್ರದರ್ಶನ ಗಮನ ಸೆಳೆದಿತು.
ಜಾನಪದ ಸಾಹಿತಿ ಡಾ. ವಾಸುದೇವ ಸೇಡಂ ಎಚ್. (ಸಂಶೋಧಕ-ಸಾಹಿತಿ, ಮುಡಬಿ ಗುಂಡೇರಾವ) ಅವರು ಮಾತನಾಡಿ,
“ಆಧುನಿಕ ಕಾಲದಲ್ಲಿ ಇಂತಹ ಜಾನಪದ ಸಂಸ್ಕೃತಿ, ಪರಂಪರೆ ಮರೆಮಾಚುತ್ತಿರುವ ಸಂದರ್ಭದಲ್ಲಿ ಅಪರೂಪದ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ. ಪಾಟೀಲ, ಶಿವಯೋಗೆಪ್ಪಾ ಎಸ್. ಬಿರಾದಾರ ಸೇರಿ ಗ್ರಾಮಸ್ಥರು ಜಾನಪದ ಕಲಾವಿದರಿಗೆ ಗೌರವ ಸಲ್ಲಿಸಿದರು.
ಮಮದಾಪುರದಲ್ಲಿ ಕೋಲಾಟ, ಭಜನೆಯೊಂದಿಗೆ ಸಾಂಸ್ಕೃತಿಕ ಉತ್ಸವ.

ಆಳಂದ ತಾಲೂಕಿನ ಮಮದಾಪುರ ಗ್ರಾಮದಲ್ಲಿ ನಾಗರ ಪಂಚಮಿ ಹಬ್ಬವನ್ನು ಸಂಸ್ಕೃತಿ, ಸಂಭ್ರಮ ಮತ್ತು ಸಾಂಘಿಕತೆಯೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ಹಬ್ಬದ ಮುಖ್ಯ ಆಕರ್ಷಣೆಯಾಗಿ ಮಕ್ಕಳಿಂದ ಕೋಲಾಟ ನಡೆಯಿತು. ಬಣ್ಣ ಬಣ್ಣದ ಉಡುಪು ಧರಿಸಿ, ಕೋಲು ಹಿಡಿದ ಮಕ್ಕಳು ಜನಪದ ಗೀತೆಗಳ ತಾಳಕ್ಕೆ ಸೊಗಸಾದ ಹೆಜ್ಜೆ ಹಾಕಿದರು. ಈ ಕಲಾತ್ಮಕ ಪ್ರದರ್ಶನ ಗ್ರಾಮಸ್ಥರ ಮನಸ್ಸನ್ನು ಗೆದ್ದಿತು.
ಹಿರಿಯರು ಸಮೂಹವಾಗಿ ಭಜನೆ ಹಾಡುವ ಮೂಲಕ ಶ್ರಾವಣದ ನಾದಬ್ರಹ್ಮದಲ್ಲಿ ಭಕ್ತಿಪೂರಿತ ವಾತಾವರಣವನ್ನು ಸೃಷ್ಟಿಸಿದರು.
ಈ ಸಂಭ್ರಮದಲ್ಲಿ ಪಾಲ್ಗೊಂಡವರು:ಬಸವರಾಜ ಡಿಗ್ಗಿ, ಭೀಮಾಶಂಕರ ಬಬಾಲಾದೆ, ಶಂಕರ್ ಪಾಟೀಲ ಸಾಗರ್, ಭೀಮಳಿ, ಪ್ರವೀಣ ಕಾಪ್ಸೆ, ಮೌನೇಶ್ ಕೋರೆ, ಶ್ರೀಕಾಂತ್ ಕಾಪ್ಸೆ, ಆಕಾಶ ಮಾನೆ ಸೇರಿದಂತೆ ಅನೇಕರು.