ಆಳಂದ: ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ್ ನಂಬರ್ 08ರಲ್ಲಿ ರಸ್ತೆಗಳ ದುಸ್ಥಿತಿ ಜನತೆಗೆ ತೀವ್ರ ತೊಂದರೆಯನ್ನುಂಟುಮಾಡಿದೆ. ಹದಗೆಟ್ಟ ರಸ್ತೆಗಳಿಂದ ಚರಂಡಿ ನೀರು ರಸ್ತೆಗಳ ಮೇಲೆ ಹರಿದು ಸಂಚಾರಕ್ಕೆ ಬಹುತೇಕ ಅಡಚಣೆಯಾಗುತ್ತಿದೆ.
ಸ್ಥಳೀಯರು ತಿಳಿಸಿದಂತೆ, ಈ ಪ್ರದೇಶದಲ್ಲಿ ಬಸ್ ನಿಲ್ದಾಣ ಮತ್ತು ಶಾಲೆಗೆ ಹೋಗುವ ಮಕ್ಕಳು ಪ್ರತಿದಿನವೂ ಕಷ್ಟಪಟ್ಟು ಈ ರಸ್ತೆಯಲ್ಲಿ ಸಾಗುವಂತಾಗಿದೆ. ಗುಮ್ಮಿಯಿಂದ ಕುಡಿಯುವ ನೀರು ತರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಿಂದಾಗಿ ಸಾಂಕ್ರಾಮಿಕ ರೋಗಗಳ ಹರಡುವ ಭೀತಿ ಹೆಚ್ಚಾಗಿದ್ದು, ಗ್ರಾಮಸ್ಥರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.
ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, PDO ಹಾಗೂ ವಾರ್ಡ್ ಸದಸ್ಯರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ಆರೋಪಿಸಿದ್ದಾರೆ. ರಸ್ತೆ ಪಕ್ಕದಲ್ಲಿರುವ ಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಕಡಮೆಗೊಳ್ಳಲಾಗಿದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಆಕ್ರೋಶದ ಮಾತು ಕೇಳಿಬರುತ್ತಿದೆ.
ಗ್ರಾಮಸ್ಥರ ಒತ್ತಾಯ: ರಸ್ತೆಗಳನ್ನು ತಕ್ಷಣ ದುರಸ್ತಿ ಮಾಡಿಸಿ, ಚರಂಡಿ ನೀರಿನ ಸರಿಯಾದ ನಿರ್ವಹಣೆಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಮಾರಕ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆ ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಬಲವಾದ ಒತ್ತಾಯ ವ್ಯಕ್ತಪಡಿಸಿದ್ದಾರೆ.