ಆಳಂದ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಮಳೆಗಾಲದಲ್ಲಿ ಹೋಗುವುದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯರಿಗೆ ನಿತ್ಯದ ಸಂಕಷ್ಟವಾಗಿದೆ. ಮಳೆ ಬಂದ ತಕ್ಷಣವೇ ರಸ್ತೆಗಳು ಹೊಳೆಯಾಗಿ ಪರಿವರ್ತನೆಗೊಂಡು ಜಲಾವೃತ ಪರಿಸ್ಥಿತಿ ಉಂಟಾಗುತ್ತಿದೆ.
ಪ್ರತಿ ಮಳೆಯಲ್ಲೂ ಮಕ್ಕಳು ಕೈಯಲ್ಲಿ ಪುಸ್ತಕ ಹಿಡಿದು, ನೀರಿನಲ್ಲಿ ಚಿಮ್ಮುತ್ತಾ ಶಾಲೆಗೆ ಹೋಗುವ ಸ್ಥಿತಿ ಸಾಮಾನ್ಯವಾಗಿದೆ. ಹೀಗೆ ಸುರಕ್ಷತೆಯ ಕೊರತೆಯ ನಡುವೆ ಶಿಕ್ಷಣ ಪಡೆಯುವ ಧೈರ್ಯ ವಿದ್ಯಾರ್ಥಿಗಳಿಗಿದೆ ಆದರೆ ಸಮಸ್ಯೆಗೆ ಪರಿಹಾರವಿಲ್ಲ.
ಸ್ಥಳೀಯ ನಿವಾಸಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ, “ಇದೇ ಸಮಸ್ಯೆ ವರ್ಷಗಳಿಂದ ಇತ್ತು, ಅಧಿಕಾರಿಗಳು ಬೇಟಿ ಕೊಟ್ಟರೂ ಇವರೆಗೆ ಯಾವುದೇ ಕ್ರಮವಾಗಿಲ್ಲ” ಎಂದರು.
ವರ್ಷದ ಆರಂಭದಲ್ಲಿಯೇ ಮಳೆಯ ಕಾರಣದಿಂದ ಶಾಲಾ ಪ್ರವೇಶ ದಾರಿಗಳು ನಿರ್ವಾಹಕ್ಕೆ ಅರ್ಹವಲ್ಲದಂತಾಗಿದ್ದು, ಪಕ್ಕದಲ್ಲಿರುವ ಚರಂಡಿ ಸರಿ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳ ವೈಫಲ್ಯ ಕೂಡ ಹೆಚ್ಚುವರಿ ತೊಂದರೆಯಾಗಿದೆ.
ಶಾಲಾ ಆಡಳಿತ ಮಂಡಳಿ ಹಲವಾರು ಬಾರಿ ಈ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅರ್ಜಿ ಸಲ್ಲಿಸಿದರೂ ನಿರ್ಲಕ್ಷ್ಯ ಮುಂದುವರಿದಿದೆ ಎಂಬ ದೂರವಿದೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ನಿರ್ಧಾರಾತ್ಮಕ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವನ್ನು ಪೋಷಕರು ಹಾಗೂ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.