ಆಳಂದ: ತಾಲೂಕಿನ ಕೊಡಲಹಂಗರ್ಗಾ ಬಡಾವಣೆಯಲ್ಲಿ ಐದು ವರ್ಷಗಳಿಂದ ಮನೆಗಳಿಗೆ ನೀರು ಸರಿಯಾಗಿ ಬರುವುದಿಲ್ಲ. ಈ ಕಾರಣದಿಂದಾಗಿ ಗ್ರಾಮಸ್ಥರು ನೆರೆಹೊರೆಯ ಪ್ರದೇಶಗಳಿಂದ ನೀರು ತರಲು ಪರದಾಡುತ್ತಿದ್ದಾರೆ.
ಕೊಡಲಹಂಗರ್ಗಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಗ್ರಾಮಸ್ಥರು ಗ್ರಾಮ ಪಂಚಾಯತ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ಐದು ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ಅಧಿಕಾರಿಗಳು ಹಳೆಯ ನಳದ ಸಂಪರ್ಕಗಳನ್ನು ಕತ್ತರಿಸಿ, ಹೊಸ ಸಂಪರ್ಕ (ಕನೆಕ್ಷನ್) ನೀಡುವ ಭರವಸೆ ನೀಡಿದ್ದರು. ಆದರೆ ಇಂದಿಗೂ ಆ ಭರವಸೆ ಈಡೇರಿಲ್ಲ. ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪರಿಹಾರ ಕಂಡುಬಂದಿಲ್ಲ. “ಜಲ ಜೀವನ ಮಿಷನ್ (ಜೆಜೆಎಂ) ಬಿಲ್ ಆಗಿಲ್ಲ” ಎಂಬ ಕಾರಣವನ್ನು ಅಧಿಕಾರಿಗಳು ಮುಂದಿಟ್ಟು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ.
ಕುಡಿಯುವ ನೀರಿನ ಜೊತೆಗೆ ಜಾನುವಾರುಗಳಿಗೂ ನೀರು ಸಿಗದಿರುವುದರಿಂದ ಸಮಸ್ಯೆ ಇನ್ನೂ ಗಂಭೀರವಾಗಿದೆ. “ಐದು ವರ್ಷಗಳಿಂದ ಕಾಯುತ್ತಿದ್ದೇವೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ನಮ್ಮ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ,” ಎಂದು ಗ್ರಾಮಸ್ಥರಾದ ಅಣವೀರಯ್ಯ ಸ್ವಾಮಿ, ಸೀತಾಬಾಯಿ ನಡಗೇರಿ, ಶಿಲ್ಡಪ್ಪ ನಡಗೇರಿ, ಯಲ್ಲಮ್ಮ ನಡಗೇರಿ, ನೀಲಮ್ಮ ಮಂಟಗಿ, ಅನಿತಾ ನಡಗೇರಿ, ನಾಗಪ್ಪ ಮೇಲಿನಕೇರಿ, ಮುಕ್ತಾಬಾಯಿ ಮೇಲಿನಕೇರಿ, ರತ್ನಾಬಾಯಿ ಸಂಗೋಳಗಿ, ಗುರು ಶಾಂತಯ್ಯ ಸ್ವಾಮಿ, ಚೆನ್ನಯ್ಯ ಸ್ವಾಮಿ, ಅಮೀನಾ ಮುಲ್ಲಾ, ಮುಬೀನಾ ಮುಲ್ಲಾ, ಶಾರದಾಬಾಯಿ ಸ್ವಾಮಿ ಮತ್ತು ಇತರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಈ ಸಮಸ್ಯೆಯಿಂದ ಬೇಸತ್ತ ಗ್ರಾಮಸ್ಥರು, ಶೀಘ್ರದಲ್ಲೇ ನಳದ ಸಂಪರ್ಕ ಒದಗಿಸದಿದ್ದರೆ, ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗ್ರಾಮಸ್ಥರು ತಮ್ಮ ಮೂಲಭೂತ ಅಗತ್ಯವಾದ ಕುಡಿಯುವ ನೀರಿಗಾಗಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಆಳಂದ: ಕೊಡಲಹಂಗರ್ಗಾ ಬಡಾವಣೆಯಲ್ಲಿ ಐದು ವರ್ಷಗಳಿಂದ ನೀರಿಲ್ಲ – ಗ್ರಾಮಸ್ಥರಿಂದ ಆಕ್ರೋಶ.

By Editor
On: July 26, 2025 3:08 PM
